Wednesday, September 24, 2025

ಶ್ರೀಲಂಕಾ ವಿರುದ್ಧ ಪಾಕ್ ಗೆ ನಿರ್ಣಾಯಕ ಗೆಲುವು! ಫೈನಲ್ ಆಸೆ ಜೀವಂತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಬುಧಾಬಿಯಲ್ಲಿ ನಡೆದ ಏಷ್ಯಾಕಪ್ ಸೂಪರ್ 4ರ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಜಯ ಗಳಿಸಿ ಫೈನಲ್ ಪ್ರವೇಶದ ನಿರೀಕ್ಷೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ. ಶ್ರೀಲಂಕಾ ನೀಡಿದ್ದ 134 ರನ್‌ಗಳ ಗುರಿಯನ್ನು ಪಾಕಿಸ್ತಾನ 18 ಓವರ್‌ಗಳಲ್ಲಿ ಸಾಧನೆ ಮಾಡಿ ಪಂದ್ಯವನ್ನು ತಮ್ಮದಾಗಿಸಿಕೊಂಡಿತು.

ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಭಾರೀ ವೈಫಲ್ಯ ಅನುಭವಿಸಿತು. ಆರಂಭಿಕ ವಿಕೆಟ್‌ಗಳನ್ನು ಬೇಗ ಕಳೆದುಕೊಂಡ ತಂಡಕ್ಕೆ ಮಧ್ಯಮ ಕ್ರಮಾಂಕವೂ ಬಲ ತುಂಬಲಿಲ್ಲ. ಕುಸಾಲ್ ಮೆಂಡಿಸ್ ಹಾಗೂ ಪಾತುಮ್ ನಿಸ್ಸಾಂಕ ತ್ವರಿತವಾಗಿ ಪೆವಿಲಿಯನ್ ಸೇರಿದರೆ, ನಾಯಕ ಚರಿತ್ ಅಸಲಂಕಾ ಹಾಗೂ ಕುಸಾಲ್ ಪೆರೆರಾ ಕೂಡ ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ.

ಕಮಿಂದು ಮೆಂಡಿಸ್ ಮಾತ್ರ 44 ಎಸೆತಗಳಲ್ಲಿ 50 ರನ್‌ಗಳಿಸಿ ತಂಡವನ್ನು ಗೌರವಾನ್ವಿತ ಮೊತ್ತಕ್ಕೆ ಕೊಂಡೊಯ್ದರು. ಇಡೀ 20 ಓವರ್‌ಗಳಲ್ಲಿ ಶ್ರೀಲಂಕಾ ಕೇವಲ 134 ರನ್‌ಗಳನ್ನೇ ಕಲೆಹಾಕಿತು. ಪಾಕಿಸ್ತಾನದ ಬೌಲಿಂಗ್‌ನಲ್ಲಿ ಶಾಹೀನ್ ಅಫ್ರಿದಿ 3 ವಿಕೆಟ್‌ ಹಾಗೂ ಹುಸೇನ್ ತಲಾತ್, ಹ್ಯಾರಿಸ್ ರೌಫ್ ತಲಾ 2 ವಿಕೆಟ್‌ಗಳನ್ನು ಪಡೆದರು.

ಗುರಿ ಬೆನ್ನಟ್ಟಿದ ಪಾಕಿಸ್ತಾನ ಉತ್ತಮ ಆರಂಭ ಪಡೆದರೂ ಮಧ್ಯದಲ್ಲಿ ನಿರಂತರ ವಿಕೆಟ್‌ಗಳನ್ನು ಕಳೆದುಕೊಂಡಿತು. ಸಾಹಿಬ್ಜಾದಾ ಫರ್ಹಾನ್ 24, ಫಖರ್ ಜಮಾನ್ 17 ರನ್‌ಗಳಿಸಿದರು. ಹಸರಂಗ ಮತ್ತು ಮಹೀಶ್ ತೀಕ್ಷಣ ಶ್ರಿಲಂಕಾಗೆ ಗೆಲುವಿನ ಭರವಸೆ ನೀಡಿದರೂ ಅವರ ಬೌಲಿಂಗ್​ ಗೆಲುವಿಗೆ ಸಾಕಾಗಲಿಲ್ಲ. ಕೊನೆಯಲ್ಲಿ ಹುಸೇನ್ ತಲಾತ್ (ಅಜೇಯ 32) ಮತ್ತು ಮೊಹಮ್ಮದ್ ನವಾಜ್ (ಅಜೇಯ 38) ಶಾಂತವಾಗಿ ಆಟ ಆಡುತ್ತಾ ತಂಡವನ್ನು ವಿಜಯ ತೀರಕ್ಕೆ ಕೊಂಡೊಯ್ದರು. ಇವರಿಬ್ಬರ 58 ರನ್‌ಗಳ ಅಮೂಲ್ಯ ಜೊತೆಯಾಟದಿಂದ ಪಾಕಿಸ್ತಾನ ಸುಲಭವಾಗಿ ಗೆದ್ದಿತು.

ಇದನ್ನೂ ಓದಿ