Sunday, September 14, 2025

ಟೀಮ್ ಇಂಡಿಯಾ ಬೌಲಿಂಗ್‌ ದಾಳಿಗೆ ಪತರುಗುಟ್ಟಿದ ಪಾಕ್: ಸೂರ್ಯ ಪಡೆಗೆ 128 ರನ್‌ ಗುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್‌ 2025ರ ಬಹುನಿರೀಕ್ಷಿತ ಭಾರತ–ಪಾಕಿಸ್ತಾನ ಕದನದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಶ್ರೇಷ್ಠ ಪ್ರದರ್ಶನ ತೋರಿದ್ದು, ಪಾಕಿಸ್ತಾನವನ್ನು ಕೇವಲ 127 ರನ್‌ಗಳಿಗೆ ಸೀಮಿತಗೊಳಿಸಿದ್ದಾರೆ. ಸಂಘಟಿತ ಬೌಲಿಂಗ್ ದಾಳಿಗೆ ಜೊತೆಯಾದ ತೀಕ್ಷ್ಣ ಕ್ಷೇತ್ರರಕ್ಷಣೆಯ ನೆರವಿನಿಂದ ಭಾರತವು ಪಂದ್ಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ಆರಂಭವೇ ದುರಂತವಾಯಿತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಓವರ್‌ನ ಮೊದಲ ಅಧಿಕೃತ ಚೆಂಡಿನಲ್ಲೇ ಸೈಮ್ ಆಯೂಬ್ ಔಟಾದರು. ಅದರ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ ಎರಡನೇ ಓವರ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್‌ನ್ನು ಪೆವಿಲಿಯನ್‌ಗೆ ಕಳುಹಿಸಿದರು. ಕೇವಲ 6 ರನ್‌ಗಳಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡ ಪಾಕ್ ಒತ್ತಡಕ್ಕೆ ಸಿಲುಕಿತು.

ಮಧ್ಯಕ್ರಮದ ಹೋರಾಟ ವಿಫಲ
ಶಾಹಿಝಾದ್ ಫರ್ಹಾನ್ ಹಾಗೂ ಫಖರ್ ಜಮಾನ್ ಮೂರನೇ ವಿಕೆಟ್‌ಗೆ 39 ರನ್‌ಗಳ ಜತೆಯಾಟ ನೀಡಿ ಸ್ವಲ್ಪ ಮಟ್ಟಿಗೆ ಪಾಕ್‌ಗೆ ಬಲ ನೀಡಿದರೂ, ನಂತರದ ಬ್ಯಾಟರ್‌ಗಳು ತೀವ್ರ ಒತ್ತಡವನ್ನು ನಿಭಾಯಿಸಲು ವಿಫಲರಾದರು. ಅಕ್ಷರ್ ಪಟೇಲ್ ಫಖರ್ ಜಮಾನ್ (17) ಮತ್ತು ನಾಯಕ ಸಲ್ಮಾನ್ ಅಲಿ ಆಘಾ (3) ಅವರನ್ನು ಶೀಘ್ರದಲ್ಲೇ ಪೆವಿಲಿಯನ್‌ಗೆ ಕಳುಹಿಸಿ ಭಾರತಕ್ಕೆ ಮುನ್ನಡೆ ನೀಡಿದರು.

ಒಂದು ಹಂತದಲ್ಲಿ 45ಕ್ಕೆ 2 ವಿಕೆಟ್ ಇದ್ದ ಪಾಕ್, 97 ರನ್‌ಗಳಲ್ಲೇ 8 ವಿಕೆಟ್ ಕಳೆದುಕೊಂಡಿತು. ಇದಕ್ಕೆ ಪ್ರಮುಖ ಕಾರಣ ಕುಲ್ದೀಪ್ ಯಾದವ್‌ರ ಅದ್ಭುತ ಸ್ಪೆಲ್. ಕೇವಲ 18 ರನ್ ನೀಡಿ 3 ವಿಕೆಟ್ ಕಬಳಿಸಿದ ಅವರು ಪಾಕ್ ಬ್ಯಾಟಿಂಗ್ ಲೈನ್‌ಅಪ್‌ಗೆ ದೊಡ್ಡ ಹೊಡೆತ ನೀಡಿದರು. ಬುಮ್ರಾ 2 ವಿಕೆಟ್ ಪಡೆದು ಬೆಂಬಲ ನೀಡಿದರೆ, ಹಾರ್ದಿಕ್ ಪಾಂಡ್ಯ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.

ಪಾಕಿಸ್ತಾನದ ಪರ ಶಾಹಿಝಾದ್ ಫರ್ಹಾನ್ 44 ಎಸೆತಗಳಲ್ಲಿ 40 ರನ್‌ಗಳನ್ನು ದಾಖಲಿಸಿ ಅಮೂಲ್ಯ ಕೊಡುಗೆ ನೀಡಿದರು. ಇನ್ನು ಕೊನೆಯಲ್ಲಿ ಶಾಹೀನ್ ಶಾ ಅಫ್ರಿದಿ ತನ್ನ ಬ್ಯಾಟಿಂಗ್ ಕೌಶಲ್ಯ ತೋರಿಸಿ ಕೇವಲ 16 ಎಸೆತಗಳಲ್ಲಿ 4 ಸಿಕ್ಸರ್‌ಗಳೊಂದಿಗೆ ಅಜೇಯ 33 ರನ್‌ಗಳನ್ನು ಸಿಡಿಸಿದರು. ಅವರ ಸ್ಪೋಟಕ ಬ್ಯಾಟಿಂಗ್‌ನಿಂದಾಗಿ ಪಾಕ್ ಮೊತ್ತ 120ರ ಗಡಿ ದಾಟಿತು.

ಇದನ್ನೂ ಓದಿ