ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಫೈಜ್ ಹಮೀದ್ ಅವರಿಗೆ 14 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ, ಮಿಲಿಟರಿ ಕೋರ್ಟ್ ಘೋಷಿಸಿದೆ.
ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ (FGCM) ಈ ತೀರ್ಪು ನೀಡಿದೆ.
ಮಿಲಿಟರಿ ನ್ಯಾಯಾಲಯವು ಹಮೀದ್ ಅವರನ್ನು ಹಲವಾರು ದುಷ್ಕೃತ್ಯ ಮತ್ತು ಸೇವಾ ನಿಯಮಗಳ ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ಘೋಷಿಸಿತು. ಇದು ಪಾಕಿಸ್ತಾನದ ಮಿಲಿಟರಿ ಅಥವಾ ರಾಜಕೀಯದಲ್ಲಿ ಅಭೂತಪೂರ್ವ ತೀರ್ಪು ಎಂದು ವಿಶ್ಲೇಷಿಸಲಾಗಿದೆ.
ಹಮೀದ್ ವಿರುದ್ಧ 2024ರ ಆಗಸ್ಟ್ 12ರಂದು ಪಾಕಿಸ್ತಾನ ಸೇನಾ ಕಾಯ್ದೆ ಅಡಿಯಲ್ಲಿ ಆರಂಭವಾಗಿ, 15 ತಿಂಗಳಿಗೂ ಹೆಚ್ಚು ಕಾಲ ತೀವ್ರ ವಿಚಾರಣೆ ನಡೆಯಿತು.
ಈ ಅವಧಿಯಲ್ಲಿ, ಪ್ರೊಸಿಕ್ಯೂಟರ್‌ಗಳು ನಾಲ್ಕು ಪ್ರಮುಖ ಆರೋಪಗಳನ್ನು ಮುಂದಿಟ್ಟಿದ್ದರು: ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವುದು, ರಾಜ್ಯ ಭದ್ರತೆಗೆ ಹಾನಿ ಉಂಟುಮಾಡುವ ರೀತಿಯಲ್ಲಿ ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿರುವುದು, ಅಧಿಕಾರ ಮತ್ತು ಸರ್ಕಾರಿ ಸಂಪನ್ಮೂಲಗಳನ್ನು ದುರುಪಯೋಗ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಸೇನೆಯ ಸುದೀರ್ಘ ಮತ್ತು ಪ್ರಯಾಸಕರ ವಿಚಾರಣೆಗಳ ನಂತರ, ನ್ಯಾಯಾಲಯವು ಹಮೀದ್ ಅವರನ್ನು ಎಲ್ಲಾ ಆರೋಪಗಳಲ್ಲೂ ದೋಷಿ ಎಂದು ತೀರ್ಪು ನೀಡಿತು. 14 ವರ್ಷದ ಕಠೋರ ಕಾರಾಗೃಹ ಶಿಕ್ಷೆಯ ತೀರ್ಪನ್ನು ಅಧಿಕೃತವಾಗಿ ಡಿಸೆಂಬರ್ 11, 2025 ರಂದು ಘೋಷಿಸಲಾಯಿತು.

