ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ ಕಾರ್ಯಾಚರಣೆ ಸಮಯ ಭಾರತದ ವಾಯುನೆಲೆಗಳ ಮೇಲೆ ದಾಳಿ ನಡೆಸಿದ್ದೇವೆ, ಈ ಸಂದರ್ಭದಲ್ಲಿ ಭಾರತದ ರಫೇಲ್ ಯುದ್ಧ ವಿಮಾನಗಳನ್ನ ಹೊಡೆದುರುಳಿಸಿದ್ದೇವೆ ಎಂದು ಪದೇ ಪದೇ ಸುಳ್ಳು ಹೇಳಿಕೊಳ್ಳುತ್ತಿರುವ ಪಾಕಿಸ್ತಾನ ಜಗತ್ತಿನ ಮುಂದೆ ಮತ್ತೊಮ್ಮೆ ಬೆತ್ತಲಾಗಿದೆ.
ಹೌದು, ರಫೇಲ್ ನಷ್ಟದ ಕುರಿತು ಪಾಕಿಸ್ತಾನಿ ಪತ್ರಕರ್ತ ನ ಲೇಖನವನ್ನ ಫ್ರೆಂಚ್ ನೌಕಾಪಡೆ ಸಾರಾಸಗಟಾಗಿ ತಿರಸ್ಕರಿಸಿದ್ದು, ಇದು ಅಪ್ಪಟ ಸುಳ್ಳು ʻವ್ಯಾಪಕ ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ಹೇಳಿದೆ.
ʻFrench commander confirms Pakistan air superiority in May 2025 combat with Indiaʼ ಶೀರ್ಷಿಕೆ ಅಡಿಯಲ್ಲಿ ಪ್ರಕಟವಾಗಿದ್ದ ಪಾಕಿಸ್ತಾನಿ ಪರ್ತಕರ್ತ ಹಮೀದ್ ಮಿರ್ ಲೇಖನಕ್ಕೆ ಎಕ್ಸ್ ಪೋಸ್ಟ್ ಮೂಲಕ ಫ್ರೆಂಚ್ ನೌಕಾಪಡೆಯ ಸ್ಪಷ್ಟನೆ ನೀಡಿದೆ. ಹಮೀದ್ ಮಿರ್ ಪ್ರಕಟಿಸಿದ ಲೇಖನ ತಪ್ಪು ಮಾಹಿತಿಗಳಿಂದ ಕೂಡಿದೆ ಎಂದು ಹೇಳಿದೆ.
ಪಾಕಿಸ್ತಾನಿ ಪತ್ರಕರ್ತನ ಲೇಖನದ ಪ್ರಕಾರ, ಮೇ ತಿಂಗಳಲ್ಲಿ ಭಾರತದೊಂದಿಗಿನ ಯುದ್ಧದಲ್ಲಿ ಪಾಕಿಸ್ತಾನ ವಾಯುಶ್ರೇಷ್ಠತೆ ಮೆರೆದಿತ್ತು. ಇದನ್ನ ಸ್ವತಃ ಫ್ರೆಂಚ್ ಕಮಾಂಡರ್ ದೃಢಪಡಿಸಿದ್ದಾರೆ ಎಂದು ಉಲ್ಲೇಖಿಸಿತ್ತು. ಈ ವರದಿಯನ್ನ ಫ್ರೆಂಚ್ ನೌಕಾಪಡೆ ಸಾರಾಸಗಟಾಗಿ ತಿರಸ್ಕರಿಸಿದ್ದು, ಪಾಕಿಸ್ತಾನಕ್ಕೆ ಮತ್ತೆ ಮುಖಭಂಗವಾಗಿದೆ.
ಈ ಬೆನ್ನಲ್ಲೇ ಫ್ರೆಂಚ್ ನೌಕಾಪಡೆಯ ಹೇಳಿಕೆಗೆ ಬಿಜೆಪಿ ಐಟಿ ಸೆಲ್ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಪ್ರತಿಕ್ರಿಯಿಸಿದ್ದಾರೆ. ʻಪಾಕಿಸ್ತಾನದ ಸುಳ್ಳಿನ ಮುಖವಾಡ ಮತ್ತೊಮ್ಮೆ ಬಹಿರಂಗಗೊಂಡಿದೆ. ಆಪರೇಷನ್ ಸಿಂಧೂರ ಸಮಯದಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಹೊಡೆದಿರುವುದಾಗಿ ಕಟ್ಟು ಕಥೆ ಹೇಳುತ್ತಿತ್ತು. ಇದನ್ನೇ ಪ್ರಚಾರದ ಒಂದು ಮಾದರಿಯಾಗಿ ಮಾಡಿಕೊಂಡಿತ್ತು. ಈಗ ಸುಳ್ಳಿನ ಎಲ್ಲಾ ಮುಖವಾಡ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

