ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ಯಾಲೇಸ್ತೀನ್ ಅನ್ನು ರಾಷ್ಟ್ರವನ್ನಾಗಿ ಗುರುತಿಸಲು ಇಟಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ನಿರಾಕರಿಸಿದರು ಎಂದು ಇಟಲಿಯಲ್ಲಿ ಪ್ಯಾಲೇಸ್ತೀನ್ ಪರ ಪ್ರತಿಭಟನಾಕಾರರು ರೊಚ್ಚಿಗೆದ್ದಿದ್ದಾರೆ.
ಗಾಜಾದಲ್ಲಿ ಇಸ್ರೇಲ್ ಯುದ್ಧದಿಂದ ಸಂಭವಿಸಿರುವ ಸಾವುಗಳು ಹಾಗೂ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ಯಾಲೆಸ್ತೀನಿಯನ್ ರಾಜ್ಯವನ್ನು ಅವರು ಬೆಂಬಲಿಸಲು ನಿರಾಕರಿಸಿದರು ಎಂದು ಆರೋಪಿಸಿ ಪ್ರತಿಭಟನಾಕಾರರು ಬೀದಿಗಿಳಿದಿದ್ದು, ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ರಸ್ತೆಗಳು ಮತ್ತು ಬಂದರುಗಳನ್ನು ಬಂದ್ ಮಾಡಿದ್ದಾರೆ. ಬಸ್ ನಿಲ್ದಾಣಗಳು ಮತ್ತು ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದ್ದು, ಇದರಿಂದ ಇಟಲಿಯಾದ್ಯಂತ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣಗೊಂಡಿದೆ..
ಗಾಜಾದಲ್ಲಿ ಪ್ಯಾಲಸ್ತೀನ್‌ಯನ್ನರ ಸಾಮೂಹಿಕ ಹತ್ಯೆಗಳ ವಿರುದ್ಧ ಕಾರ್ಮಿಕ ಸಂಘಗಳು ಕರೆ ನೀಡಿದ್ದ ‘ಎಲ್ಲವನ್ನೂ ನಿರ್ಬಂಧಿಸೋಣ’ ಎಂಬ ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಈ ಪ್ರದರ್ಶನಗಳು ನಡೆದವು.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಕಪ್ಪು ಬಟ್ಟೆ ಧರಿಸಿ ಪ್ಯಾಲಸ್ತೀನ್ ಧ್ವಜವನ್ನು ಬೀಸುತ್ತಿದ್ದ ಪ್ರತಿಭಟನಾಕಾರರ ಗುಂಪು ಕಂಬವನ್ನು ಬಳಸಿ ನಿಲ್ದಾಣದ ಕಿಟಕಿಯನ್ನು ಒಡೆದು ಪೊಲೀಸರ ಮೇಲೆ ಕುರ್ಚಿಯನ್ನು ಎಸೆದರು. ಈ ಘರ್ಷಣೆಯಲ್ಲಿ 60 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡರು. ಮಿಲನ್‌ನಲ್ಲಿ 10 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಜಾದಲ್ಲಿ ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳು ಮತ್ತು ಇತರ ಸರಬರಾಜುಗಳನ್ನು ವರ್ಗಾಯಿಸಲು ಇಟಲಿಯನ್ನು ಕೇಂದ್ರವಾಗಿ ಬಳಸುತ್ತಿರುವದನ್ನು ಪ್ರತಿಭಟಿಸಿದ್ದಾರೆ. ಬೊಲೊಗ್ನಾದಲ್ಲಿ, ಪ್ರತಿಭಟನಾಕಾರರು ಹೆದ್ದಾರಿಯನ್ನು ತಡೆದು, ವಾಹನಗಳನ್ನು ನಿಲ್ಲಿಸಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.
ದಕ್ಷಿಣ ನಗರವಾದ ನೇಪಲ್ಸ್‌ನಲ್ಲಿ, ಜನಸಮೂಹವು ಮುಖ್ಯ ರೈಲ್ವೆ ನಿಲ್ದಾಣಕ್ಕೆ ಬಲವಂತವಾಗಿ ನುಗ್ಗಿದಾಗ ಪೊಲೀಸರೊಂದಿಗೆ ಘರ್ಷಣೆ ನಡೆಯಿತು. ಅವರಲ್ಲಿ ಕೆಲವರು ಸ್ವಲ್ಪ ಸಮಯದವರೆಗೆ ಹಳಿಗಳ ಮೇಲೆ ಇಳಿದರು, ಇದರಿಂದಾಗಿ ರೈಲು ಸೇವೆಯಲ್ಲಿ ವ್ಯತ್ಯವಾಗಿದೆ.