ಅನ್ನದ ಜೊತೆ ಸವಿಯಲು ಮಂಗಳೂರಿನ ಪಿಡ್ರ್ತಿ ಮನೆಯಲ್ಲೂ ತಯಾರಾಗುವ ಸಾಂಬಾರ್ ಅಂದ್ರೆ ಅದು ಸೌತೆಕಾಯಿ ಹುಳಿ. ಸೌತೆಕಾಯಿಯ ತಂಪಾದ ಗುಣ, ಹುಳಿಯ ಸವಿರುಚಿ ಮತ್ತು ಮಸಾಲೆಯ ಸುವಾಸನೆ ಸೇರಿ ಈ ತಿನಿಸಿಗೆ ವಿಶಿಷ್ಟ ರುಚಿ ಕೊಡುತ್ತವೆ. ಬೇಸಿಗೆಯ ದಿನಗಳಲ್ಲಿ ದೇಹಕ್ಕೆ ತಂಪು ನೀಡುವುದರ ಜೊತೆಗೆ ಹೊಟ್ಟೆಗೆ ಹಗುರವಾಗಿಯೂ ಇರುತ್ತದೆ. ಬಿಸಿ ಅನ್ನ, ತುಪ್ಪ ಅಥವಾ ಪಲ್ಯದ ಜೊತೆ ಇದನ್ನು ಸವಿದರೆ ಊಟದ ರುಚಿ ಮತ್ತಷ್ಟು ಹೆಚ್ಚುತ್ತದೆ.
ಬೇಕಾಗುವ ಪದಾರ್ಥಗಳು
ಸೌತೆಕಾಯಿ – 1 ಮಧ್ಯಮ ಗಾತ್ರದದು
ಈರುಳ್ಳಿ – 1 ಸಣ್ಣದು
ಟೊಮೇಟೊ – 1
ಹುಣಸೆಹಣ್ಣು – ಚಿಕ್ಕ ನಿಂಬೆ ಗಾತ್ರ
ತೆಂಗಿನ ತುರಿ – ½ ಕಪ್
ಹಸಿಮೆಣಸಿನಕಾಯಿ – 2
ಕೆಂಪು ಮೆಣಸಿನ ಪುಡಿ – ½ ಟೀ ಸ್ಪೂನ್
ಅರಿಶಿನ – ¼ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಕರಿಬೇವು – ಸ್ವಲ್ಪ
ಎಣ್ಣೆ – 1 ಟೇಬಲ್ ಸ್ಪೂನ್
ಮಾಡುವ ವಿಧಾನ
ಮೊದಲು ಸೌತೆಕಾಯಿಯ ಸಿಪ್ಪೆ ತೆಗೆದು ಚಿಕ್ಕ ತುಂಡುಗಳಾಗಿ ಕತ್ತರಿಸಿ. ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಸೌತೆಕಾಯಿ ತುಂಡುಗಳನ್ನು ಅರಿಶಿನ ಮತ್ತು ಉಪ್ಪಿನೊಂದಿಗೆ ಬೇಯಿಸಿ.
ಮಿಕ್ಸಿಯಲ್ಲಿ ತೆಂಗಿನ ತುರಿ, ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಜೀರಿಗೆ ಹಾಕಿ ನುಣ್ಣಗೆ ರುಬ್ಬಿ.
ಬೇಯಿಸಿದ ಸೌತೆಕಾಯಿಗೆ ಹುಣಸೆ ರಸ, ಟೊಮೇಟೊ ತುಂಡುಗಳು ಮತ್ತು ರುಬ್ಬಿದ ಮಿಶ್ರಣ ಸೇರಿಸಿ 5–7 ನಿಮಿಷ ಕುದಿಯಲು ಬಿಡಿ.
ಕೊನೆಯಲ್ಲಿ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು ಒಗ್ಗರಣೆ ಮಾಡಿ ಹುಳಿಗೆ ಹಾಕಿ.
ಬಿಸಿ ಅನ್ನದ ಜೊತೆ ಸವಿಯಲು ರುಚಿಯಾದ ಸೌತೆಕಾಯಿ ಹುಳಿ ಸಿದ್ಧ



