ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ವಿಜಯ್ ಹಝಾರೆ ಟ್ರೋಫಿಯಲ್ಲಿ ಹಾರ್ದಿಕ್ ಪಾಂಡ್ಯ ತಮ್ಮದೇ ಶೈಲಿಯಲ್ಲಿ ಪಂದ್ಯಕ್ಕೆ ಜೀವ ತುಂಬಿದ್ದಾರೆ. ಬರೋಡಾ ಮತ್ತು ವಿದರ್ಭ ನಡುವಿನ ಪಂದ್ಯದಲ್ಲಿ ಕಷ್ಟಕರ ಪರಿಸ್ಥಿತಿಯಲ್ಲಿ ಕಣಕ್ಕಿಳಿದ ಪಾಂಡ್ಯ, ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ಬೆಚ್ಚಿಬೀಳುವಂತಹ ಪ್ರದರ್ಶನ ನೀಡಿದ್ದಾರೆ.
ನಿರಂಜನ್ ಶಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ವಿದರ್ಭ ನಾಯಕ ಹರ್ಷ್ ದುಬೆ ನಿರ್ಧಾರ ಆರಂಭದಲ್ಲಿ ಸಫಲವಾಯಿತು. ಬರೋಡಾ ತಂಡ 71 ರನ್‌ಗಳಿಗೆ ಐದು ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಹಾರ್ದಿಕ್ ಪಾಂಡ್ಯ ಪಂದ್ಯ ಚಿತ್ರಣವೇ ಬದಲಿಸಿದರು.
ಆರಂಭದಲ್ಲಿ ಸಮತೋಲನದ ಆಟ ಆಡಿದ ಪಾಂಡ್ಯ, 62 ಎಸೆತಗಳಲ್ಲಿ 66 ರನ್ ತಲುಪಿದ ಬಳಿಕ ಗೇರ್ ಬದಲಿಸಿದರು. ಪಾರ್ಥ್ ರೇಖಾಡೆ ಎಸೆದ ಒಂದು ಓವರ್‌ನಲ್ಲಿ ಸತತ ಐದು ಸಿಕ್ಸರ್ ಹಾಗೂ ಒಂದು ಫೋರ್ ಬಾರಿಸಿ ಒಟ್ಟು 34 ರನ್ ಕಲೆಹಾಕಿದರು. ಇದರೊಂದಿಗೆ ಕೇವಲ 68 ಎಸೆತಗಳಲ್ಲಿ ಶತಕ ಪೂರೈಸಿ ಮೈದಾನವನ್ನು ರಣರಂಗವನ್ನಾಗಿಸಿದರು.
ಇದನ್ನೂ ಓದಿ:
ಶತಕದ ಬಳಿಕವೂ ಅವರ ಆಕ್ರಮಣ ನಿಂತಿಲ್ಲ. 92 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 8 ಫೋರ್‌ಗಳೊಂದಿಗೆ 133 ರನ್‌ಗಳ ಭರ್ಜರಿ ಇನಿಂಗ್ಸ್ ಕಟ್ಟಿದರು. ಹಾರ್ದಿಕ್ ಪಾಂಡ್ಯ ಅವರ ಈ ಸ್ಪೋಟಕ ಆಟದ ನೆರವಿನಿಂದ ಬರೋಡಾ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 293 ರನ್ ಗಳಿಸಿತು. ವಿದರ್ಭ ತಂಡಕ್ಕೆ 294 ರನ್‌ಗಳ ಸವಾಲು ನೀಡಲಾಯಿತು.
ಈ ಇನಿಂಗ್ಸ್ ವಿಶೇಷವಾಗಿದ್ದು, ಹಾರ್ದಿಕ್ ಪಾಂಡ್ಯ ಅವರ ಲಿಸ್ಟ್-ಎ ಕ್ರಿಕೆಟ್‌ನ ಮೊದಲ ಶತಕವೂ ಆಗಿದೆ. ಇದುವರೆಗೆ 92 ರನ್‌ಗಳೇ ಅವರ ಗರಿಷ್ಠ ಸ್ಕೋರ್ ಆಗಿತ್ತು. ಈ ಮೂಲಕ ಏಕದಿನ ಮಾದರಿಯಲ್ಲಿ ಶತಕದ ಖಾತೆ ತೆರೆದು ಪಾಂಡ್ಯ ತಮ್ಮ ಸಾಮರ್ಥ್ಯಕ್ಕೆ ಮತ್ತೊಮ್ಮೆ ಸಾಕ್ಷಿ ನೀಡಿದರು.

