Monday, September 8, 2025

Parenting Tips | ಯಾವ ಮಕ್ಕಳ ವಯಸ್ಸಿಗೆ ಎಷ್ಟು ತೂಕ ಇರಬೇಕು? ಪೋಷಕರಿಗೆ ತಿಳಿದಿರಬೇಕಾದ ವಿಷ್ಯ ಇದು!

ಮಗುವಿನ ಬೆಳವಣಿಗೆ ಪೋಷಕರಿಗೆ ಸದಾ ಚಿಂತೆಯ ವಿಷಯವಾಗಿರುತ್ತದೆ. ಶಿಶುವಿನಿಂದ ಪ್ರೌಢಾವಸ್ಥೆಯವರೆಗೆ ದೇಹದ ತೂಕ ಮತ್ತು ಎತ್ತರ ಸರಿಯಾಗಿ ಹೆಚ್ಚುತ್ತಿದೆಯೇ ಎಂದು ಗಮನಿಸುವುದು ಬಹಳ ಮುಖ್ಯ. ಇದರಿಂದ ಮಗುವಿನ ಆರೋಗ್ಯ ಸ್ಥಿತಿ ಹೇಗಿದೆ ಎಂಬುದನ್ನು ವೈದ್ಯರು ಸ್ಪಷ್ಟವಾಗಿ ತಿಳಿಯಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜನನದ ಸಮಯದಲ್ಲಿ ಶಿಶುವಿನ ಸರಾಸರಿ ತೂಕ 2.5 ರಿಂದ 3.5 ಕೆಜಿ ಇರುತ್ತದೆ. 2.5 ಕೆಜಿಗಿಂತ ಕಡಿಮೆ ತೂಕವಿದ್ದರೆ ಅದನ್ನು ಕಡಿಮೆ ಜನನ ತೂಕವೆಂದು ಪರಿಗಣಿಸಲಾಗುತ್ತದೆ ಮತ್ತು ವಿಶೇಷ ಕಾಳಜಿ ಅಗತ್ಯವಿರುತ್ತದೆ.

ಮಗು ಹುಟ್ಟಿದ ಮೊದಲ ವರ್ಷವೇ ಬೆಳವಣಿಗೆಯ ವೇಗ ಹೆಚ್ಚು. ಈ ಅವಧಿಯಲ್ಲಿ ಮಗು ತನ್ನ ಜನನ ತೂಕವನ್ನು ಮೂರು ಪಟ್ಟು ಹೆಚ್ಚಿಸಬಹುದು. 1 ವರ್ಷದವರೆಗೆ ಸುಮಾರು 9-10 ಕೆಜಿ ತೂಕ ಮತ್ತು 25 ಸೆಂ.ಮೀ ಎತ್ತರ ಹೆಚ್ಚಾಗುವುದು ಸಾಮಾನ್ಯ. ನಂತರ 2 ರಿಂದ 5 ವರ್ಷದವರೆಗೆ ಬೆಳವಣಿಗೆ ನಿಧಾನಗೊಳ್ಳುತ್ತದೆ. 2 ವರ್ಷದಲ್ಲಿ ಸುಮಾರು 11-12 ಕೆಜಿ ತೂಕ ಮತ್ತು 85 ಸೆಂ.ಮೀ ಎತ್ತರ, 5 ವರ್ಷಕ್ಕೆ 17-18 ಕೆಜಿ ತೂಕ ಮತ್ತು 105 ಸೆಂ.ಮೀ ಎತ್ತರ ಸಾಮಾನ್ಯವೆಂದು ಪರಿಗಣಿಸಲಾಗಿದೆ.

ಶಾಲಾ ವಯಸ್ಸಿನ 6 ರಿಂದ 12 ವರ್ಷಗಳ ಮಕ್ಕಳಲ್ಲಿ ತೂಕವು ನಿಧಾನವಾಗಿ ಹೆಚ್ಚುತ್ತದೆ. 6 ವರ್ಷಕ್ಕೆ 19-20 ಕೆಜಿ, 12 ವರ್ಷಕ್ಕೆ 35-40 ಕೆಜಿ ತೂಕ ಕಾಣಬಹುದು. ಎತ್ತರವು ವರ್ಷಕ್ಕೆ ಸರಾಸರಿ 5 ಸೆಂ.ಮೀ ಹೆಚ್ಚಾಗುತ್ತದೆ. ಹದಿಹರೆಯದ ಅವಧಿಯಾದ 13 ರಿಂದ 18 ವರ್ಷಗಳಲ್ಲಿ ಹಾರ್ಮೋನುಗಳ ಪ್ರಭಾವದಿಂದ ತೂಕ ಮತ್ತು ಎತ್ತರ ತೀವ್ರವಾಗಿ ಏರಿಕೆಯಾಗುತ್ತವೆ. 18 ವರ್ಷಕ್ಕೆ ತೂಕ 55-65 ಕೆಜಿ ವರೆಗೆ ಇರಬಹುದು.

ಮಕ್ಕಳ ದೈಹಿಕ ಬೆಳವಣಿಗೆಯನ್ನು ಆನುವಂಶಿಕ ಗುಣಲಕ್ಷಣಗಳು, ಗರ್ಭಾವಸ್ಥೆಯ ಪೋಷಣೆ, ಆರೋಗ್ಯಕರ ಆಹಾರ, ಸೋಂಕುಗಳು ಮತ್ತು ಜೀವನಶೈಲಿ ನೇರವಾಗಿ ಪ್ರಭಾವಿಸುತ್ತವೆ. ಆದ್ದರಿಂದ ಪೋಷಕರು ಪ್ರತಿನಿತ್ಯ ಮಕ್ಕಳ ತೂಕ ಮತ್ತು ಎತ್ತರವನ್ನು ಗಮನಿಸುವುದರೊಂದಿಗೆ, ಪೌಷ್ಠಿಕ ಆಹಾರ ಒದಗಿಸಿ, ಕ್ರೀಡೆ ಹಾಗೂ ವ್ಯಾಯಾಮಕ್ಕೆ ಉತ್ತೇಜಿಸಬೇಕು.

ಇದನ್ನೂ ಓದಿ