ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇರುವ ಬಹು ದೊಡ್ಡ ಸಮಸ್ಯೆ ಎಂದರೆ ಅದು ಪಾರ್ಕಿಂಗ್. ಮೆಟ್ರೋ ಸ್ಟೇಷನ್ಗಳ ಬಳಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಮೆಟ್ರೋ ಪ್ರಯಾಣಿಕರು ಸ್ಟೇಷನ್ ಅಕ್ಕಪಕ್ಕದ ರಸ್ತೆಗಳಲ್ಲಿ, ಮನೆಗಳ ಗೇಟ್ ಬಳಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ.
ಇದರಿಂದ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಸಮಸ್ಯೆ ಎದುರಿಸುವಂತಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಡಿಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದು, ಮುಂಬರುವ ಮೆಟ್ರೋ ಮಾರ್ಗಗಳಲ್ಲಿ ಬರುವ ಸ್ಟೇಷನ್ಗಳ ಬಳಿ ಅಕ್ಕಪಕ್ಕದ ಜಾಗವನ್ನು ಖರೀದಿ ಮಾಡಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು, ಮೆಟ್ರೋ ಸ್ಟೇಷನ್ನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಮಾಡಬೇಕು. ಇದರಿಂದ ಪ್ರಯಾಣಿಕರಿಗೆ ಉಪಯೋಗ ಆಗಲಿದೆ ಎಂದು ಸೂಚನೆ ನೀಡಿದ್ದಾರೆ.
ಡಿಸಿಎಂ ಸೂಚನೆ ಹಿನ್ನೆಲೆ ಬಿಎಂಆರ್ಸಿಎಲ್ ಅಧಿಕಾರಿಗಳು ಇನ್ಮುಂದೆ ಆರಂಭವಾಗಲಿರುವ ಮೆಟ್ರೋ ಮಾರ್ಗಗಳು ಮತ್ತು ವಿಸ್ತರಣೆ ಆಗಲಿರುವ ಮೆಟ್ರೋ ಮಾರ್ಗಗಳಾದ ಆರೆಂಜ್ ಲೈನ್, ಬ್ಲೂ ಲೈನ್, ರೆಡ್ ಲೈನ್, ಪಿಂಕ್ ಲೈನ್, ಯೆಲ್ಲೋ ಲೈನ್ ಮೆಟ್ರೋ ಸ್ಟೇಷನ್ಗಳ ಬಳಿ ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಾಣ ಮಾಡಲು ಅಕ್ಕಪಕ್ಕದ ಜಾಗವನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಮೆಟ್ರೋ ನಿಲ್ದಾಣಗಳಲ್ಲಿ ಬಹುಮಹಡಿ ಪಾರ್ಕಿಂಗ್ ಸ್ಲಾಟ್ಗಳ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಮೆಟ್ರೋ ಸ್ಟೇಷನ್ಗಳ ಬಳಿ ಹೆಚ್ಚಿನ ಭೂಮಿ ಸ್ವಾಧೀನ ಮಾಡಿಕೊಳ್ಳಲು ಬಿಎಂಆರ್ಸಿಎಲ್ ಅಧಿಕಾರಿಗಳು ಮುಂದಾಗಿದ್ದಾರೆ.
METRO | ನಮ್ಮ ಮೆಟ್ರೋ ಪ್ರಯಾಣಿಕರಿಗೆ ಪಾರ್ಕಿಂಗ್ ದೊಡ್ಡ ಸಮಸ್ಯೆ! ಇದಕ್ಕೆ ಸಿಕ್ತು ಬಿಗ್ ಪರಿಹಾರ

