ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಗಣವಸ್ತ್ರ ಧರಿಸಿ ಭಾಗಿಯಾಗಿದ್ದ ತಿಪಟೂರಿನ ವೈದ್ಯ ಶ್ರೀಧರ್ ಹೆಸರನ್ನು ಯಶಸ್ವಿನಿ ಟ್ರಸ್ಟ್‌ನಿಂದ ಕೈಬಿಡಲಾಗಿದೆ.
ವೈದ್ಯರಿಗೆ ಸರ್ಕಾರದ ಯಶಸ್ವಿನಿ ಟ್ರಸ್ಟ್ ಟ್ರಸ್ಟಿಯಾಗಿ ನೇಮಿಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ತಕ್ಷಣವೇ ಡಾ. ಶ್ರೀಧರ್ ಅವರನ್ನು ಟ್ರಸ್ಟಿಯಾಗಿ ನೇಮಿಸಿ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ ಶಶಿಧರ್ ಒತ್ತಾಯಿಸಿದ್ದರು. ತೀವ್ರ ವಿರೋಧಗಳ ಬೆನ್ನಲ್ಲೇ ಯಶಸ್ವಿನಿ ಟ್ರಸ್ಟ್‌ನ ಟ್ರಸ್ಟಿ ಸ್ಥಾನದಿಂದ ವೈದ್ಯ ಶ್ರೀಧರ್ ಹೆಸರನ್ನು ಕೈಬಿಡಲಾಗಿದೆ. ಈ ಸಂಬಂಧ ಸರ್ಕಾರ ಆದೇಶವನ್ನು ಹೊರಡಿಸಿದ್ದು, ಆಡಳಿತಾತ್ಮಕ ದೃಷ್ಟಿಯಿಂದ ಈ ಹಿಂದಿನ ಆದೇಶವನ್ನು ಮಾರ್ಪಡಿಸಿ, ಡಾ. ಶೀಧರ್ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ತಿಳಿಸಿದೆ.
ಈ ಹಿಂದಿನ ಆದೇಶ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಶಶಿಧರ್, ‘ಅಕ್ಟೋಬರ್ 12ರಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿ ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್ ಅವರು ಗಣವೇಶ ಧರಿಸಿ ಭಾಗಿಯಾಗಿದ್ದರು. ಮಾತ್ರವಲ್ಲದೆ, ಆ್ಯಂಬುಲೆನ್ಸ್‌ಅನ್ನೂ ಕೊಂಡೊಯ್ದಿದ್ದರು. ಅವರನ್ನು ಸರ್ಕಾರದ ‘ಯಶಸ್ವಿನಿ ಟ್ರಸ್ಟ್’ಗೆ ಟ್ರಸ್ಟಿಯಾಗಿ ನೇಮಿಸುವಂತೆ ಕಾಂಗ್ರೆಸ್ ಶಾಸಕ ಪಡಕ್ಷರಿ ಅವರು ಶಿಫಾರಸು ಮಾಡಿದ್ದರು. ಅವರ ಶಿಫಾರಸಿನಂತೆ ಸರ್ಕಾರವು ಡಾ. ಶ್ರೀಧರ್ ಅವರನ್ನು ಟ್ರಸ್ಟಿಯಾಗಿ ನೇಮಿಸಿದೆ. ಇದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಳವಳ ಹುಟ್ಟುಹಾಕಿದೆ’ ಎಂದು ತಿಳಿಸಿದ್ದರು.
ಇನ್ನು ಈ ಬಗ್ಗೆ ತಿಪಟೂರಿನಲ್ಲಿ ಶಾಸಕ ಕೆ. ಷಡಾಕ್ಷರಿ ಪ್ರತಿಕ್ರಿಯಿಸಿದ್ದು, ಪ್ರಕರಣದಿಂದ ಸಿಎಂಗೆ ಮುಜುಗರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಡಾ.ಶ್ರೀಧರ್ ಆರ್.ಎಸ್.ಎಸ್ ನಲ್ಲಿ ಸಕ್ರಿಯವಾಗಿರುವುದು ನನಗೆ ಗೊತ್ತಿರಲಿಲ್ಲ. ಅವರ ಅಭಿಮಾನಿಗಳು ಜನರ ಸೇವೆ ಮಾಡಿದ್ದಾರೆ ಅವಕಾಶ ನೀಡಿ ಎಂದು ಪ್ರಸ್ತಾಪ ಮಾಡಿದ್ದರು. ಉಚಿತವಾಗಿ ಆಪರೇಷನ್, ಔಷಧಿ ನೀಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಎಂದು ಮನವಿ ಮಾಡಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

