ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಗೋ ಏರ್‌ಲೈನ್ಸ್‌ನ ನಿರಂತರ ವಿಮಾನ ರದ್ದತಿಯಿಂದ ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಆರಂಭವಾದ ಸಮಸ್ಯೆ ಇಂದು ಆರನೇ ದಿನಕ್ಕೂ ಮುಂದುವರಿದಿದ್ದು, ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 7ರಂದು 50ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಇದರಿಂದ ವಿವಿಧ ರಾಜ್ಯಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರು ಗಂಟೆಗಟ್ಟಲೇ ವಿಮಾನ ನಿಲ್ದಾಣದಲ್ಲೇ ಕಾದು, ಕೊನೆಗೆ ನಿರಾಶರಾಗಿ ಮನೆಗೆ ಮರಳುವಂತಾಗಿದೆ. ಮುಂಚಿತವಾಗಿ ಪ್ರಯಾಣ ಯೋಜನೆ ಮಾಡಿಕೊಂಡಿದ್ದ ಕುಟುಂಬಗಳು, ವೃದ್ಧರು ಮತ್ತು ಮಕ್ಕಳೊಂದಿಗೆ ಬಂದವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.
ವಿಮಾನ ರದ್ದತಿಗಳ ಹೆಚ್ಚಳದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಇಂಡಿಗೋ ಸಂಸ್ಥೆಯ ಸಿಇಒಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ. ಯಾವುದೇ ಮುನ್ಸೂಚನೆ ಇಲ್ಲದೆ ವಿಮಾನಗಳನ್ನು ರದ್ದುಪಡಿಸಿರುವ ಕಾರಣ ಮತ್ತು ಪ್ರಯಾಣಿಕರಿಗೆ ಉಂಟಾದ ಗಂಭೀರ ತೊಂದರೆಗಳ ಕುರಿತು 24 ಗಂಟೆಯೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

