ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ಪ್ರಸಿದ್ಧ ಕೊಂಡಗಟ್ಟು ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ನಿಧಿಯಿಂದ ಕೈಗೊಳ್ಳಲಿರುವ ಬೃಹತ್ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಈ ಬಗ್ಗೆ ಮಾತನಾಡಿದ ಪವನ್ ಕಲ್ಯಾಣ್, ಹಿಂದೆ ಕೊಂಡಗಟ್ಟುವಿಗೆ ಭೇಟಿ ನೀಡಿದ ವೇಳೆ ಭಕ್ತರು ಹಾಗೂ ದೇವಾಲಯ ಆಡಳಿತದ ಮನವಿಯ ಮೇರೆಗೆ ಟಿಟಿಡಿಯಿಂದ ಅನುದಾನ ಮಂಜೂರು ಮಾಡಲಾಗಿತ್ತು. ಧಾರ್ಮಿಕ ಕಾರ್ಯಗಳಿಗೆ ಕೇವಲ ಆಸೆ ಸಾಕಾಗದು, ದೇವರ ಅನುಗ್ರಹವೂ ಅಗತ್ಯವಿದೆ ಎಂದು ಹೇಳಿದ ಅವರು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಾಯಕರು ಹಾಗೂ ಟಿಟಿಡಿ ಮಂಡಳಿ ಸದಸ್ಯರ ಒಗ್ಗಟ್ಟಿನ ಪ್ರಯತ್ನದಿಂದಲೇ ಈ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Rice series 44 | ಕೇವಲ 30 ನಿಮಿಷಗಳಲ್ಲಿ ತಯಾರಿಸಿ ಸಾಂಪ್ರದಾಯಿಕ ಖಾರ ಪೊಂಗಲ್
ಕೊಂಡಗಟ್ಟು ಕ್ಷೇತ್ರದೊಂದಿಗೆ ತಮ್ಮ ಜೀವನಕ್ಕೆ ಆಳವಾದ ನಂಟಿದೆ ಎಂದು ಹೇಳಿದ ಪವನ್ ಕಲ್ಯಾಣ್, ಹಿಂದಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇದೇ ಪ್ರದೇಶದಲ್ಲಿ ತಮಗೆ ಹೈಟೆನ್ಷನ್ ವಿದ್ಯುತ್ ತಂತಿ ತಗಲಿ ಭಾರೀ ಅಪಘಾತ ಸಂಭವಿಸಿದ್ದನ್ನು ನೆನಪಿಸಿಕೊಂಡರು. ಪ್ರಾಣಾಪಾಯದಿಂದ ಪಾರಾದ ಆ ಘಟನೆ ತಮ್ಮ ಜೀವನದ ಪುನರ್ಜನ್ಮದಂತೆ ಅನುಭವವಾಗಿದೆ ಎಂದು ಹೇಳಿ, ಕೊಂಡಗಟ್ಟು ಅಂಜನೇಯನ ಕೃಪೆಯಿಂದಲೇ ಬದುಕುಳಿದೆ ಎಂದು ಭಾವನಾತ್ಮಕವಾಗಿ ಹೇಳಿದರು.

