Tuesday, September 2, 2025

ಎರಡು ಮತದಾರ ಗುರುತಿನ ಚೀಟಿ ಹೊಂದಿದ ಆರೋಪ: ಚುನಾವಣಾ ಆಯೋಗದ ನೊಟೀಸ್ ಗೆ ಪವನ್ ಖೇರಾ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎರಡು ಮತದಾರ ಗುರುತಿನ ಚೀಟಿಗಳನ್ನು ಹೊಂದಿರುವ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಭಾರತದ ಚುನಾವಣಾ ಆಯೋಗವು ಸಮನ್ಸ್ ಜಾರಿ ಮಾಡಿದೆ. ಖೇರಾ ಅವರನ್ನು ಸೆಪ್ಟೆಂಬರ್ 8ರಂದು ಬೆಳಗ್ಗೆ 11 ಗಂಟೆಗೆ ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಈ ಹಿನ್ನೆಲೆ ಬಿಜೆಪಿ ಹಾಗೂ ಚುನಾವಣಾ ಆಯೋಗವನ್ನು ಪವನ್ ಖೇರಾ ನೋಟಿಸ್ ಟೀಕಿಸಿದ್ದು, ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿಯ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.

ನಾನು ದೆಹಲಿ ಕ್ಷೇತ್ರದಿಂದ 2016ರಲ್ಲೇ ಶಿಫ್ಟ್ ಆಗಿದ್ದೇನೆ. ಅಲ್ಲಿಂದ ನನ್ನ ಹೆಸರು ಡಿಲೀಟ್ ಮಾಡಲು ಅರ್ಜಿಯನ್ನೂ ಸಲ್ಲಿಸಿದ್ದೇನೆ. ಆದರೂ ಚುನಾವಣಾ ಆಯೋಗ ಎರಡೂ ಕಡೆಗಳಲ್ಲಿ ನನ್ನ ಹೆಸರನ್ನು ಇರಿಸಿಕೊಂಡಿದೆ. ನಾನು ಎರಡೂ ಕಡೆ ಮತ ಚಲಾಯಿಸಿದ್ದೇನೆ ಎಂಬುದಕ್ಕೆ ಸಿಸಿಟಿವಿ ದಾಖಲೆ ನೀಡಲಿ. ಚುನಾವಣಾ ಆಯೋಗ ಮಾಡಿದ ತಪ್ಪನ್ನು ನನ್ನ ಮೇಲೆ ಹಾಕಲಾಗುತ್ತಿದೆ ಎಂದಿದ್ದಾರೆ.

ಚುನಾವಣಾ ಆಯೋಗ ಹಲವು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಒಂದೇ ಹೆಸರನ್ನಿಟ್ಟಿದೆ. ಆ ಮೂಲಕ ಮತ ಕಳ್ಳತನ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಸಾಕ್ಷಿ ಸಮೇತ ಸಾಬೀತುಪಡಿಸಿದ್ದರು. ಆದರೆ, ಆ ಬಗ್ಗೆ ಆಯೋಗ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರೆಲ್ಲರೂ ಎರಡು ಕಡೆ ಹೆಸರಿದ್ದರೂ ಒಂದೇ ಕಡೆ ಮತ ಚಲಾವಣೆ ಮಾಡಿದ್ದಾರೆ ಎಂದು ಬಿಜೆಪಿ ಘೋಷಿಸಿತ್ತು. ಅದೇ ರೀತಿ ನಾನು ಕೂಡ ನವದೆಹಲಿಯಿಂದ 2016ರಲ್ಲೇ ಶಿಫ್ಟ್ ಆಗಿದ್ದೇನೆ. ಹಾಗಿದ್ದರೆ ದೆಹಲಿ ಕ್ಷೇತ್ರದಲ್ಲಿ ನನ್ನ ಹೆಸರಿನಲ್ಲಿ ಯಾರು, ಯಾರಿಗೆ ಮತ ಹಾಕುತ್ತಿದ್ದಾರೆ ಎಂಬುದನ್ನು ತಿಳಿಯಲು ಸಿಸಿಟಿವಿ ವಿಡಿಯೋ ನೀಡಬೇಕು ಎಂದಿದ್ದಾರೆ.

ನಾನು 2016ರಲ್ಲಿಯೇ ದೆಹಲಿಯಿಂದ ಸ್ಥಳಾಂತರಗೊಂಡೆ. ಅಲ್ಲಿಂದ ನನ್ನ ಹೆಸರನ್ನು ತೆಗೆದುಹಾಕಲು ನಾನು ಅಪ್ಲಿಕೇಷನ್ ನೀಡಿದ್ದೇನೆ. ಆದರೂ ನನ್ನ ಹೆಸರು ಇನ್ನೂ ಏಕೆ ಇದೆ? ಆಗಸ್ಟ್ 7ರಿಂದ ಇಲ್ಲಿಯವರೆಗೆ ರಾಹುಲ್ ಗಾಂಧಿ ಇದನ್ನೇ ಹೇಳುತ್ತಿದ್ದಾರೆ. ಭಾರತದ ಪ್ರತಿಯೊಂದು ಕ್ಷೇತ್ರದಲ್ಲಿಯೂ ನೂರಾರು ಮತ್ತು ಸಾವಿರಾರು ಅಂತಹ ನಕಲಿ ಹೆಸರುಗಳಿವೆ. ಇವುಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಪವನ್ ಖೇರಾ ಆರೋಪಿಸಿದ್ದಾರೆ.

ಕರ್ನಾಟಕದ ಮಹಾದೇವಪುರ ಕ್ಷೇತ್ರದಲ್ಲಿ 1,00,000 ನಕಲಿ ಮತದಾರರು ಪತ್ತೆಯಾಗಿದ್ದಾರೆ ಎಂಬ ಆರೋಪದ ಬಗ್ಗೆ ಯಾಕೆ ಯಾವುದೇ ನೋಟಿಸ್ ನೀಡಿಲ್ಲ? ಈಗ ನನಗೆ ಮಾತ್ರ ನೋಟಿಸ್ ನೀಡಿದ್ದೇಕೆ? ಎಂದು ಪವನ್ ಖೇರಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ