Wednesday, December 10, 2025

ನಮ್ಮ ಕಡೆಗೂ ಸ್ವಲ್ಪ ಗಮನ ಕೊಡಿ! ಕೆಲಸದ ಸಮಯ ಮಿತಿಗೆ ರೈಲ್ವೆ ಲೋಕೋ ಪೈಲಟ್‌ಗಳ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕೆಲಸದ ಒತ್ತಡ ಮತ್ತು ಸುರಕ್ಷತೆ ಕುರಿತ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಇತ್ತೀಚೆಗೆ ವಿಮಾನಯಾನ ಕ್ಷೇತ್ರದಲ್ಲಿ ಕಂಡುಬಂದ ಇಂಡಿಗೋ ಸಂಸ್ಥೆಯ ಕಾರ್ಯಾಚರಣಾ ಬಿಕ್ಕಟ್ಟಿನ ಬೆನ್ನಲ್ಲೇ, ಭಾರತೀಯ ರೈಲ್ವೆಯ ಲೋಕೋ ಪೈಲಟ್‌ಗಳು ತಮ್ಮ ಕರ್ತವ್ಯ ಸಮಯ ಮತ್ತು ರಜಾ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಕಾರ್ಯಭಾರದಿಂದ ಉಂಟಾಗುವ ಆಯಾಸವು ರೈಲು ಅಪಘಾತಗಳಿಗೆ ಕಾರಣವಾಗಬಹುದೆಂಬ ಆತಂಕ ವ್ಯಕ್ತಪಡಿಸಿರುವ ಅವರು, ಕರ್ತವ್ಯ ಸಮಯವನ್ನು ಮಿತಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಲೋಕೋ ಪೈಲಟ್ ಹುದ್ದೆಗಳ ಭರ್ತಿ ವಿಳಂಬ, ನಿರಂತರ ದೀರ್ಘ ಕೆಲಸದ ಗಂಟೆಗಳು ಮತ್ತು ವೈಜ್ಞಾನಿಕ ರೋಸ್ಟರ್ ವ್ಯವಸ್ಥೆಯ ಕೊರತೆ ತಮ್ಮ ಮೇಲೆ ಒತ್ತಡ ಮೂಡಿಸುತ್ತಿದೆ ಎಂದು ಸಿಬ್ಬಂದಿ ವಲಯ ಹೇಳಿಕೊಂಡಿದೆ. ವಿಮಾನಯಾನ ಪೈಲಟ್‌ಗಳಿಗೆ ಸಂಬಂಧಿಸಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ, ರೈಲ್ವೆ ಸಿಬ್ಬಂದಿಯ ಸುರಕ್ಷತೆಗೂ ಆದ್ಯತೆ ನೀಡಬೇಕು ಎನ್ನುವುದು ಅವರ ವಾದವಾಗಿದೆ.

ಅಖಿಲ ಭಾರತ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಷನ್ ಈ ಸಂಬಂಧ ಪ್ರತಿಕ್ರಿಯಿಸಿ, ಖಾಸಗಿ ವಿಮಾನಯಾನ ಸಂಸ್ಥೆಗಳ ವಿಚಾರದಲ್ಲಿ ಸರ್ಕಾರ ಮೃದು ನಿಲುವು ತಾಳುತ್ತಿದೆ ಮತ್ತು ಸರ್ಕಾರಿ ನೌಕರರ ಬೇಡಿಕೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಟೀಕಿಸಿದೆ.

ಪ್ರಯಾಣಿಕರ ಸುರಕ್ಷತೆ ಸಂಪೂರ್ಣವಾಗಿ ಚಾಲಕರ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಅವಲಂಬಿತವಾಗಿರುವುದರಿಂದ, ಆಕಾಶದಲ್ಲಿರಲಿ ಅಥವಾ ಹಳಿಗಳ ಮೇಲಿರಲಿ, ಆಯಾಸವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

error: Content is protected !!