Monday, December 1, 2025

ಶಾಂತಿ ಮಾತುಕತೆ ವಿಫಲ: ಪಾಕ್‌ಗೆ ಅಫ್ಘಾನ್‌ ‘ಯುದ್ಧ ಸಿದ್ಧ’ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಶಾಂತಿ ಮಾತುಕತೆಗಳು ಸಂಪೂರ್ಣವಾಗಿ ವಿಫಲವಾಗಿವೆ. ಇದರ ಬೆನ್ನಲ್ಲೇ, ಅಫ್ಘಾನಿಸ್ತಾನವು “ನಾವು ಯುದ್ಧಕ್ಕೆ ಸಿದ್ಧ” ಎಂಬ ಖಡಕ್‌ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ.

ಟರ್ಕಿ ಮತ್ತು ಕತಾರ್ ದೇಶಗಳ ಸಕ್ರಿಯ ಮಧ್ಯಸ್ಥಿಕೆ ಪ್ರಯತ್ನಗಳ ಹೊರತಾಗಿಯೂ ಇಸ್ತಾನ್‌ಬುಲ್‌ನಲ್ಲಿ ನಡೆದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಈ ಮಾತುಕತೆಗಳು ಯಾವುದೇ ಪ್ರಗತಿ ಸಾಧಿಸದೆ ಸ್ಥಗಿತಗೊಂಡಿವೆ.

ಪಾಕಿಸ್ತಾನದ ವಿರುದ್ಧ ಅಫ್ಘಾನ್‌ ಆಕ್ರೋಶ

ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ (ತಾಲಿಬಾನ್ ಆಡಳಿತ) ಈ ವೈಫಲ್ಯಕ್ಕೆ ನೇರವಾಗಿ ಪಾಕಿಸ್ತಾನವನ್ನೇ ದೂಷಿಸಿದೆ. ಪಾಕಿಸ್ತಾನದ ವರ್ತನೆಯನ್ನು ‘ಅಪ್ರಬುದ್ಧ’ ಮತ್ತು ‘ಬೇಜವಾಬ್ದಾರಿ’ ಎಂದು ಟೀಕಿಸಿದೆ. ಶಾಂತಿ ಮಾತುಕತೆಗಳ ಪ್ರಗತಿಗೆ ಪಾಕಿಸ್ತಾನವೇ ಅಡ್ಡಿಯಾಗಿದೆ ಎಂದು ಕಠಿಣ ಶಬ್ದಗಳಲ್ಲಿ ಆರೋಪ ಮಾಡಿದೆ.

“ಪಾಕಿಸ್ತಾನವು ಮತ್ತೊಮ್ಮೆ ತನ್ನ ಬೇಜವಾಬ್ದಾರಿ ಮತ್ತು ಅಸಹಕಾರ ಮನೋಭಾವವನ್ನು ಪ್ರದರ್ಶಿಸಿದೆ. ತನ್ನ ಭದ್ರತೆಗೆ ಸಂಬಂಧಿಸಿದ ವಿಚಾರದಲ್ಲಿ ಅಫ್ಘಾನಿಸ್ತಾನದ ಮೇಲೆ ಗಂಭೀರ ಆರೋಪಗಳನ್ನು ಹೊರಿಸಲು ಯತ್ನಿಸಿದೆ. ಪಾಕ್‌ನ ಈ ನಡವಳಿಕೆಯಿಂದಲೇ ಮಾತುಕತೆಗಳು ಫಲಪ್ರದವಾಗಿಲ್ಲ” ಎಂದು ಅಸಮಾಧಾನ ಹೊರಹಾಕಿದೆ.

‘ಸಾರ್ವಭೌಮತ್ವದ ರಕ್ಷಣೆ’ ನಮ್ಮ ನಿಲುವು

ತಾಲಿಬಾನ್ ತನ್ನ ತಾತ್ವಿಕ ನಿಲುವನ್ನು ಪುನರುಚ್ಚರಿಸಿದೆ. ಅಫ್ಘಾನಿಸ್ತಾನದ ನೆಲವನ್ನು ಬೇರೆ ದೇಶದ ವಿರುದ್ಧ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಅದೇ ರೀತಿ, ಯಾವುದೇ ವಿದೇಶಿ ರಾಷ್ಟ್ರವು ಅಫ್ಘಾನಿಸ್ತಾನದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯದ ವಿರುದ್ಧ ವರ್ತಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹೇಳಿಕೆಯು ಪರೋಕ್ಷವಾಗಿ ಪಾಕಿಸ್ತಾನದ ಉದ್ದೇಶಿತ ಕ್ರಮಗಳಿಗೆ ಎಚ್ಚರಿಕೆ ನೀಡಿದಂತಿದೆ.

ಮಾತುಕತೆಗಳ ಸ್ಥಗಿತ ಕುರಿತು ಪ್ರತಿಕ್ರಿಯಿಸಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಮೂರನೇ ಸುತ್ತಿನ ಮಾತುಕತೆಗಳು ಯಾವುದೇ ಸಕಾರಾತ್ಮಕ ಫಲಿತಾಂಶಗಳಿಲ್ಲದೆ ಅನಿಶ್ಚಿತ ಹಂತವನ್ನು ತಲುಪಿವೆ ಎಂದು ಒಪ್ಪಿಕೊಂಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಉಭಯ ದೇಶಗಳ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುವ ಸಾಧ್ಯತೆ ಇದೆ.

error: Content is protected !!