ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ಸುರಿದ ಮಳೆಯಿಂದಾಗಿ ಹಲವೆಡೆ ಅವಾಂತಗಳು ಸೃಷ್ಟಿಯಾಗಿವೆ. ಅದರಲ್ಲಿಯೂ ಗದಗದಲ್ಲಿ ಜೋರಾದ ಗಾಳಿಗೆ ಮನೆ ಮೇಲಿನ ಸೂರು ಸಹ ಹಾರಿ ಹೋಗಿದ್ದು, ಜನರು ಕಂಗಾಲಾಗಿದ್ದಾರೆ.
ಇಂದೂ ಸಹ ರಾಜ್ಯದೆಲ್ಲೆಡೆ ಗುಡುಗು ಸಹಿತ ಮಳೆಯಿರಲಿದ್ದು, ಹವಾಮಾನ ಇಲಾಖೆ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಿದೆ.
ಗದಗ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಭಾರಿ ಗಾಳಿ, ಗುಡುಗು ಸಹಿತ ಮಳೆಯ ಅಬ್ಬರದಿಂದ ಹಲವು ಕಡೆ ಅವಾಂತರಗಳು ಸಂಭವಿಸಿವೆ. ವಿಶೇಷವಾಗಿ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದಲ್ಲಿ ಗಾಳಿಯ ತೀವ್ರತೆಗೆ ನಾಲ್ಕಕ್ಕೂ ಹೆಚ್ಚು ಮನೆಗಳ ಮೇಲಿನ ತಗಡಿನ ಶೀಟ್‌ಗಳು ಹಾರಿ ಹೋಗಿ ನಿವಾಸಿಗಳಿಗೆ ಭಾರೀ ತೊಂದರೆ ಉಂಟಾಗಿದೆ. ಶೀಟ್‌ಗಳು ಹಾರಿದ ಪರಿಣಾಮ ಶಿವಪ್ಪ ಲಮಾಣಿ ಕಾಲಿಗೆ ಗಾಯಗೊಂಡಿದ್ದು, ಸೋಮವ್ವ ಲಮಾಣಿ ಅವರ ಕೈ ಮುರಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಸ್ಥರು ಪರದಾಡಿದ ಘಟನೆ ನಡೆದಿದೆ.
ಇಷ್ಟೇ ಅಲ್ಲದೆ ಮಳೆ ಹಾಗೂ ಗಾಳಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಜನ ಕತ್ತಲಿನಲ್ಲಿಯೇ ಕಾಲ ಕಳೆಯುವಂತಾಗಿದೆ.



