ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯ ಮಾಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಮೂಲಕ ಇನ್ಮುಂದೆ ಸರ್ಕಾರಿ ಜಾಗಗಳಲ್ಲಿ ಸಂಘಗಳ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯವಾಗಿದೆ.
ಈ ಕುರಿತಂತೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಟಿಪ್ಪಣಿ ಹೊರಡಿಸಿದ್ದು, ಸಾರ್ವಜನಿಕ ಆಸ್ತಿ, ಸ್ಥಳದ ಮಾಲೀಕತ್ವ ಹೊಂದಿದ ಸಕ್ಷಮ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಲಾಗಿದೆ. ಅ.16 ರಂದು ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಸರ್ಕಾರ ನಿರ್ಣಯ ಕೈಗೊಂಡಿತ್ತು.
- ಸರ್ಕಾರದ/ಸರ್ಕಾರಿ ಸಾಮ್ಯದ ಶಾಲಾ-ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಆವರಣ – ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯಬೇಕು.
- ಉದ್ಯಾನಗಳು, ಆಟದ ಮೈದಾನಗಳು, ಇತರೆ ತೆರೆದ ಸ್ಥಳಗಳು – ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ಸಾರ್ವಜನಿಕ ರಸ್ತೆಗಳು, ಸರ್ಕಾರದ ಇತರೆ ಆಸ್ತಿ/ಸ್ಥಳಗಳು – ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು/ಪೊಲೀಸ್ ಅಧೀಕ್ಷಕರಿಂದ ಅನುಮತಿ ಪಡೆಬೇಕು.
ಹೊಸ ಮಾರ್ಗಸೂಚಿಯನ್ನು ಜಾರಿಗೊಳಿಸುವವರೆಗೆ, ಉಲ್ಲೇಖಿತ ಆದೇಶದಲ್ಲಿ ನಮೂದಿಸಿರುವ ಸಕ್ಷಮ ಪ್ರಾಧಿಕಾರವು ಚಾಲ್ತಿಯಲ್ಲಿರುವ ತಮ್ಮ ಇಲಾಖೆಯ ಮಾರ್ಗಸೂಚಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸದರಿ ಆದೇಶದಲ್ಲಿ ಉಲ್ಲೇಖಿಸಿರುವ ಸಿದ್ಧಾಂತಗಳನ್ನು ಪಾಲಿಸಿ ನ್ಯಾಯಿಕ ಆದೇಶವನ್ನು ಹೊರಡಿಸಲು ಕ್ರಮಕೈಗೊಳ್ಳುವುದು ಎಂದು ತಿಳಿಸಿದ್ದಾರೆ.