March 4, 2026
Wednesday, March 4, 2026
spot_img

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ: ಸಚಿವ ಪ್ರಿಯಾಂಕ್ ಖರ್ಗೆ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ (RSS) ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ಸಿಕ್ಕಿದ್ದು, ಇದರ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ ಎಂದು ಹೇಳಿದ್ದಾರೆ.

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್​​ ಪಥಸಂಚಲನಕ್ಕೆ ಕೊನೆಗೂ ಗ್ರೀನ್ ಸಿಗ್ನಲ್​ ಸಿಕ್ಕಿದೆ. ಈ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್​ ಮಾಡಿದ್ದು, ಸಂವಿಧಾನಕ್ಕೆ ತಲೆಬಾಗಿದರೆ ಮಾತ್ರ ಬದುಕು ಸುಂದರ. ಸಂವಿಧಾನಕ್ಕೆ ಸವಾಲು ಹಾಕಿದರೆ ಬದುಕು ದುಸ್ಥರ. ಆರ್​​​​ಎಸ್​​ಎಸ್​​ ಎಂಬ ಸಂಘಟನೆಗೆ ಈ ಸತ್ಯದ ಅರಿವಾಗಿದೆ ಎಂದು ಭಾವಿಸಿದ್ದೇನೆ. ಸಂವಿಧಾನ, ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದ RSS ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ ಎಂದು ಹೇಳಿದರು.

ಯಾವುದೇ ಸಂಘಗಳು, ವ್ಯಕ್ತಿಗಳು ಇದನ್ನು ಅರ್ಥೈಸಿಕೊಂಡು ನೀತಿ, ನಿಯಮಗಳಿಗೆ ಬದ್ಧರಾಗಿ ನಡೆಯಬೇಕು. ಸರ್ಕಾರ ಮತ್ತು ಕಲಬುರಗಿ ಜಿಲ್ಲಾಡಳಿತ ರೂಪಿಸಿರುವ ಮಾನದಂಡಗಳನ್ನು ಒಪ್ಪಿ, ನಿಯಮಗಳಿಗೆ ಅನುಸಾರವಾಗಿ ಆರ್​​ಎಸ್​​ಎಸ್​​ ತಮ್ಮ ಕಾರ್ಯಕ್ರಮ ನಡೆಸಬೇಕು ಇದರ ಹೊರತಾಗಿ ಯಾವುದೇ ಅತಿ ಬುದ್ದಿವಂತಿಕೆಗೂ ಅವಕಾಶವಿಲ್ಲ ಎಂದಿದ್ದಾರೆ.

300 ಜನರು ಮಾತ್ರ ಭಾಗವಹಿಸಬೇಕು., ಸರ್ಕಾರ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಅವಕಾಶ, ಚಿತ್ತಾಪುರದ ಹೊರಗಿನವರು ಭಾಗಿಯಾಗುವಂತಿಲ್ಲ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡುವಂತಿಲ್ಲ…ಈ ನಿಯಮಗಳ ಮೂಲಕ ಸರ್ಕಾರ ತೋರಿದ ಉದಾರತೆಯನ್ನು, ಕಲಬುರಗಿ ಜಿಲ್ಲಾಡಳಿತ ತೋರಿದ ಸಹನೆಯನ್ನು ಗೌರವಿಸಿ ತಮ್ಮ ಕಾರ್ಯಕ್ರಮವನ್ನು ಪೂರೈಸಿಕೊಳ್ಳಬೇಕು. ಜೈ ಸಂವಿಧಾನ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !