ಹೊಸದಿಗಂತ ವರದಿ, ಅಂಕೋಲಾ: :
ಮೀನು ಹಿಡಿದು ಬೆಲೇಕೇರಿ ಮೀನುಗಾರಿಕೆ ಬಂದರಿಗೆ ಮರಳುತ್ತಿದ್ದ ಪರ್ಶೀನ್ ಬೋಟ್ ಮೀನುಗಾರಿಕೆ ಬಂದರು ಸಮೀಪದ ಅಳಿವೆ ಪ್ರದೇಶದಲ್ಲಿ ಮುಳುಗಡೆಯಾಗಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ರಾತ್ರಿ ಸಮಯದಲ್ಲಿ ದುರ್ಘಟನೆ ಸಂಭವಿಸಿದ್ದು ಬೋಟಿನಲ್ಲಿದ್ದ ಮೀನುಗಾರರು ಮತ್ತು ಕಾರ್ಮಿಕರನ್ನು ಸ್ಥಳೀಯ ಮೀನುಗಾರರು ನಾಲ್ಕು ಬೋಟುಗಳಲ್ಲಿ ತೆರಳಿ ರಕ್ಷಣೆ
ಮಾಡಿದ್ದಾರೆ.
ಬೆಲೇಕೇರಿಯ ಶ್ರೀಕಾಂತ ಗಣಪತಿ ತಾಂಡೇಲ್ ಎನ್ನುವವರಿಗೆ ಸೇರಿದ ದುರ್ಗಾಪ್ರಸಾದ ಹೆಸರಿನ ಬೋಟು ಅಳಿವೆ ಪ್ರದೇಶದಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದು ಬೋಟಿನಲ್ಲಿದ್ದ ಮೀನು ಸಮುದ್ರ ಪಾಲಾಗಿದೆ.
ಮುಳುಗಡೆಯಾದ ಬೋಟನ್ನು ಬೇರೆ ಬೋಟುಗಳ ಮೂಲಕ ದಕ್ಕೆಗೆ , ಎಳೆದು ತರಲಾಗಿದ್ದು ಕ್ರೇನ್ ಸಹಾಯದಿಂದ ಎತ್ತಿ ಮೂರು ಪಂಪುಗಳನ್ನು ಬಳಸಿ ಬೋಟಿನೊಳಗಡೆ ತುಂಬಿದ್ದ ಅಪಾರ ಪ್ರಮಾಣದ ನೀರನ್ನು ಖಾಲಿ ಮಾಡಲಾಗಿದೆ.
ಎರಡು ದಿನಗಳ ಹಿಂದೆ ಬೆಲೇಕೇರಿ ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಲಂಗರು ಹಾಕಿದ ಬೋಟೊಂದು ಗಾಳಿ ಅಲೆಗಳ ಹೊಡೆತದಿಂದಾಗಿ ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿತ್ತು.
ಇದೀಗ ಎರಡೇ ದಿನಗಳ ಅವಧಿಯಲ್ಲಿ ಬೆಲೇಕೇರಿ ಮೀನುಗಾರಿಕೆ ಬಂದರು ವ್ಯಾಪ್ತಿಯಲ್ಲಿ ಎರಡು ಬೋಟುಗಳು ಮುಳುಗಡೆಯಾದಂತಾಗಿದೆ.
ಬೆಲೇಕೇರಿ ಅಳಿವೆ ಪ್ರದೇಶದಲ್ಲಿ ಹೂಳಿನ ಸಮಸ್ಯೆಯಿಂದ ಬೋಟುಗಳು ಮುಳುಗಡೆಯಾಗುವ ಸಾಧ್ಯತೆ, ಹೂಳೆತ್ತುವ ಅಗತ್ಯತೆ ಮತ್ತು ಮೀನುಗಾರಿಕೆ ಬಂದರಿಗೆ ಸೂಕ್ತ ಅಲೆ ತಡೆಗೋಡೆ ನಿರ್ಮಾಣದ ಕುರಿತಂತೆ ಮೀನುಗಾರರು ಒತ್ತಾಯಿಸುತ್ತಲೇ ಬಂದಿದ್ದು ಸಂಬಂಧಿಸಿದ ಇಲಾಖೆ ಆ ದಿಶೆಯಲ್ಲಿ ಗಮನ ಹರಿಸಬೇಕಿದೆ ಅದೇ ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಮೀನುಗಾರ ಮುಖಂಡರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮುದ್ರದಲ್ಲಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದಾಗ ಕರಾವಳಿ ಕಾವಲು ಪಡೆ ವತಿಯಿಂದ ತುರ್ತು
ಸ್ಪಂದನೆ ಸಿಗುತ್ತಿಲ್ಲ ಎಂದು ಮೀನುಗಾರರು ಬೆಲೇಕೇರಿಯ ಕರಾವಳಿ ಕಾವಲು ಪಡೆಯ ಕಚೇರಿ
ಬಳಿ ಜಮಾಯಿಸಿ ಅಸಮಾಧಾನ ವ್ಯಕ್ತಪಡಿಸಿದರು. ಮೀನುಗಾರರೊಂದಿಗೆ ಕರಾವಳಿಕಾವಲು ಪಡೆಯ ಸಿಬ್ಬಂದಿಗಳು ಚರ್ಚೆ ನಡೆಸಿ ಮೀನುಗಾರರ ಅಭಿಪ್ರಾಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದು . ಮತ್ತು ಮೀನುಗಾರರೊಂದಿಗೆ ವಿಶೇಷ ಸಭೆ ನಡೆಸಿ ಚರ್ಚಿಸುವ ಭರವಸೆ ನೀಡಿದ್ದಾರೆ.