Thursday, October 23, 2025

GBA ರಚನೆ ಕುರಿತು ಅರ್ಜಿ: ಹೈಕೋರ್ಟ್‌ ಗೆ ಸಲ್ಲಿಸಿ ಎಂದ ಸುಪ್ರೀಂ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆ ಕಾನೂನುಬಾಹಿರ ಎಂದು ಆರೋಪಿಸಿ ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಹಾಗೂ ಇತರರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಈ ಕುರಿತು ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜಾಯ್‌ಮಲ್ಯ ಬಾಗ್ಚಿ ಪೀಠವು, ಜಿಬಿಎ ರಚನೆ ಕುರಿತು ನೀವು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ. ಆದರೆ, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸದೆ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬಂದಿದ್ದು ಏಕೆ ಎಂದು ಪ್ರಶ್ನಿಸಿತು.

ಆಗ ಅರ್ಜಿದಾರರ ಪರ ವಕೀಲರು, ಜಿಬಿಎ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಹೀಗಾಗಿ, ಸುಪ್ರೀಂ ಕೋರ್ಟ್‌ಗೆ ಬಂದಿದ್ದೇವೆ ಎಂದರು. ಜಿಬಿಎ ರಚನೆ ಸಂವಿಧಾನ ವಿರೋಧಿ. ಜಿಬಿಎ ರಚನೆಯಿಂದ ಅಧಿಕಾರ ವಿಕೇಂದ್ರೀಕರಣ ಆಗುವುದಿಲ್ಲ. ಅಧಿಕಾರದ ಮರು ಕೇಂದ್ರೀಕರಣ ಆಗುತ್ತದೆ ಎಂದು ದೂರಿದ್ದಾರೆ.

ವಿಚಾರಣೆ ಬಳಿಕ ಅರ್ಜಿಯನ್ನು ಹಿಂಪಡೆಯಲು ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಸ್ವಾತಂತ್ರ‍್ಯ ನೀಡಿದ ಹಿನ್ನೆಲೆ ಅರ್ಜಿದಾರರು ತನ್ನ ಅರ್ಜಿಯನ್ನು ವಾಪಸ್ ಪಡೆದುಕೊಂಡರು.

error: Content is protected !!