January18, 2026
Sunday, January 18, 2026
spot_img

ಫಿಲ್ ಸಾಲ್ಟ್ ಬ್ಯಾಟ್‌ನಿಂದ ರನ್‌ಗಳ ‘ಮಳೆ’: ಕಿವೀಸ್ ಬೌಲರ್‌ಗಳಿಗೆ ಸಿಗದ ‘ಉಪ್ಪಿನ’ ರುಚಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಫಿಲ್ ಸಾಲ್ಟ್ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರಿ ಬ್ರೂಕ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಪ್ರವಾಸಿ ತಂಡ ಬೃಹತ್ ಮೊತ್ತ ಕಲೆಹಾಕಿದೆ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 236 ರನ್‌ಗಳನ್ನು ಪೇರಿಸಿತು.

ಟಾಸ್ ಗೆದ್ದ ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಇಂಗ್ಲೆಂಡ್‌ಗೆ ಆರಂಭಿಕ ಆಘಾತ ಎದುರಾಯಿತು; ನಾಯಕ ಜೋಸ್ ಬಟ್ಲರ್ ಕೇವಲ 4 ರನ್‌ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಆದರೆ, ಇನ್ನೊಂದೆಡೆ ಸ್ಥಿರವಾಗಿ ನೆಲೆಯೂರಿದ ಆರಂಭಿಕ ದಾಂಡಿಗ ಫಿಲ್ ಸಾಲ್ಟ್ ಅವರು ಅಬ್ಬರದ ಆಟಕ್ಕೆ ನಾಂದಿ ಹಾಡಿದರು. ಆರಂಭದಲ್ಲಿ ಎಚ್ಚರಿಕೆಯ ಆಟಕ್ಕಷ್ಟೇ ಗಮನ ನೀಡಿದ್ದ ಸಾಲ್ಟ್, ನಂತರ ಕಿವೀಸ್ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಪರಿಣಾಮ, ಕೇವಲ 33 ಎಸೆತಗಳಲ್ಲಿ ತಮ್ಮ ಸ್ಫೋಟಕ ಅರ್ಧಶತಕವನ್ನು ಪೂರೈಸಿದರು. ಅರ್ಧಶತಕದ ಬಳಿಕವೂ ಅವರ ಬ್ಯಾಟ್‌ನಿಂದ ರನ್‌ಗಳ ಪ್ರವಾಹ ಹರಿಯಿತು.

ಈ ಅಬ್ಬರದ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್ ತಂಡ ಮೊದಲ 10 ಓವರ್‌ಗಳಲ್ಲೇ 110 ರನ್ ಗಡಿ ದಾಟಿತು. ಕೇವಲ 56 ಎಸೆತಗಳನ್ನು ಎದುರಿಸಿದ ಫಿಲ್ ಸಾಲ್ಟ್ ಅವರು 1 ಸಿಕ್ಸ್ ಹಾಗೂ 11 ಫೋರ್‌ಗಳ ನೆರವಿನೊಂದಿಗೆ 85 ರನ್‌ಗಳ ಬಿರುಸಿನ ಇನ್ನಿಂಗ್ಸ್‌ ಆಡಿ ವಿಕೆಟ್ ಒಪ್ಪಿಸಿದರು. ಸಾಲ್ಟ್ ಅವರ ನಿರ್ಗಮನದ ನಂತರವೂ ಆಂಗ್ಲರ ಅಬ್ಬರ ನಿಲ್ಲಲಿಲ್ಲ. ಯುವ ಆಟಗಾರ ಹ್ಯಾರಿ ಬ್ರೂಕ್ (78) ಕೂಡ ಅರ್ಧಶತಕ ಬಾರಿಸಿ ತಂಡದ ಮೊತ್ತ 236 ತಲುಪಲು ನೆರವಾದರು.

ಫಿಲ್ ಸಾಲ್ಟ್ ಮತ್ತು ಹ್ಯಾರಿ ಬ್ರೂಕ್ ಅವರ ಈ ಸ್ಫೋಟಕ ಅರ್ಧಶತಕಗಳಿಂದಾಗಿ ನ್ಯೂಝಿಲೆಂಡ್‌ಗೆ 2ನೇ ಟಿ20 ಪಂದ್ಯವನ್ನು ಗೆಲ್ಲಲು ಕಠಿಣವಾದ 237 ರನ್‌ಗಳ ಬೃಹತ್ ಗುರಿಯನ್ನು ನೀಡಲಾಗಿದೆ.

Must Read

error: Content is protected !!