Friday, November 14, 2025

‘ಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್’: ಬಿಹಾರ ಜನರ ಪ್ರೀತಿಗೆ ಪ್ರಧಾನಿ ಮೋದಿ ಕೃತಜ್ಞತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಪ್ರಚಂಡ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧಿ ಆರ್​ಜೆಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಹಾರದಲ್ಲಿ ಬಂದೂಕು ಹಿಡಿದ ಸರ್ಕಾರ ಇನ್ನೆಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು.

ಛಠಿ ಮೈಯಾ ದೇವತೆಯನ್ನು ಸ್ಮರಿಸುತ್ತಾ ತಮ್ಮ ವಿಜಯೋತ್ಸವ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, “ನಾನು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ‘ಜಂಗಲ್‌ ರಾಜ್‌’ ಮತ್ತು ‘ಕಟ್ಟಾ ಸರ್ಕಾರ್‌’ ಬಗ್ಗೆ ಮಾತನಾಡಿದಾಗಲೆಲ್ಲ ಆರ್​ಜೆಡಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೆ, ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ನೋವುಂಟಾಗುತ್ತಿತ್ತು. ನಾನು ಮತ್ತೊಮ್ಮೆ ಹೇಳುತ್ತೇನೆ, ಬಿಹಾರದಲ್ಲಿ ‘ಕಟ್ಟಾ ಸರ್ಕಾರ್‌’ ಇನ್ನೆಂದಿಗೂ ಬರುವುದಿಲ್ಲ,” ಎಂದು ದೃಢವಾಗಿ ನುಡಿದರು.

ಬಿಹಾರದ ಪ್ರೀತಿಗೆ ಪ್ರಧಾನಿ ಭಾವುಕ

ಎನ್‌ಡಿಎಗೆ ಸಿಕ್ಕ ಐತಿಹಾಸಿಕ ಗೆಲುವಿಗೆ ಬಿಹಾರದ ಜನರನ್ನು ಅಭಿನಂದಿಸಿದ ಪ್ರಧಾನಿಗಳು, “ನಾವು ಜನರ ಸೇವಕರು. ನಮ್ಮ ಕಠಿಣ ಪರಿಶ್ರಮದಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದೇವೆ. ಅದಕ್ಕಾಗಿಯೇ ಇಡೀ ಬಿಹಾರ ‘ಫಿರ್‌ ಏಕ್‌ ಬಾರ್‌ ಎನ್‌ಡಿಎ ಸರ್ಕಾರ್‌’ (ಮತ್ತೊಮ್ಮೆ ಎನ್‌ಡಿಎ ಸರ್ಕಾರ) ಎಂದಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

“ಪ್ರಚಂಡ ಗೆಲುವು ನೀಡಬೇಕೆಂದು ನಾನು ಬಿಹಾರದ ಜನರನ್ನು ಕೇಳಿಕೊಂಡಿದ್ದೆ, ಮತ್ತು ನನ್ನ ಒಂದು ಕೂಗಿಗೆ ಅವರು ಓಗೊಟ್ಟಿದ್ದಾರೆ. 2010ರ ನಂತರ ಮೈತ್ರಿಕೂಟಕ್ಕೆ ಅತಿದೊಡ್ಡ ಅಂತರದ ಗೆಲುವು ನೀಡಿದ್ದಾರೆ. ಇದಕ್ಕಾಗಿ ಇಡೀ ಎನ್‌ಡಿಎ ಕುಟುಂಬದ ಪರವಾಗಿ, ನಾನು ಬಿಹಾರದ ಎಲ್ಲಾ ಜನರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ,” ಎಂದು ಪ್ರಧಾನಿ ಭಾವುಕರಾದರು.

ಮತದಾರರ ಧೈರ್ಯಕ್ಕೆ ಮೋದಿ ಶ್ಲಾಘನೆ

ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಶ್ಲಾಘಿಸಿದ ಪ್ರಧಾನಿ, ಈ ಚುನಾವಣೆಯು ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಿದೆ ಎಂದರು. ವಿಶೇಷವಾಗಿ, ವಂಚಿತರು ಮತ್ತು ಶೋಷಿತರಿಂದ ಮತದಾನದ ಪ್ರಮಾಣ ಹೆಚ್ಚಾಗಿರುವುದು ಆಯೋಗದ ಮಹತ್ತರ ಸಾಧನೆಯಾಗಿದೆ ಎಂದು ಹೊಗಳಿದರು.

“ಒಂದು ಕಾಲದಲ್ಲಿ ಮಾವೋವಾದಿ ಭಯೋತ್ಪಾದನೆಯಿಂದ ಪ್ರಾಬಲ್ಯ ಹೊಂದಿದ್ದ ಅದೇ ಬಿಹಾರ ಇದು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಮತದಾನ ಕೊನೆಗೊಳ್ಳುತ್ತಿತ್ತು. ಆದರೆ ಈ ಚುನಾವಣೆಯಲ್ಲಿ, ಬಿಹಾರದ ಜನರು ಭಯವಿಲ್ಲದೇ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ‘ಜಂಗಲ್‌ ರಾಜ್‌’ ಆಳ್ವಿಕೆಯಲ್ಲಿ ಮತಗಟ್ಟೆಗಳಲ್ಲಿ ಹಿಂಸಾಚಾರ ನಡೆಯುತ್ತಿತ್ತು, ಮತಪೆಟ್ಟಿಗೆಗಳನ್ನು ಲೂಟಿ ಮಾಡಲಾಗುತ್ತಿತ್ತು. ಆದರೆ ಇಂದು ಅದೇ ಬಿಹಾರವು ಶಾಂತಿಯುತ ಮತದಾನ ಮತ್ತು ದಾಖಲೆಯ ಮತದಾನವನ್ನು ನೋಡಿದೆ,” ಎಂದು ನುಡಿದ ಪ್ರಧಾನಿಗಳು, ಪ್ರತಿಯೊಬ್ಬರೂ ತಮ್ಮ ಆಯ್ಕೆಯ ಪ್ರಕಾರವೇ ಮತ ಚಲಾಯಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಜಯೋತ್ಸವ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಪಸ್ಥಿತರಿದ್ದರು.

error: Content is protected !!