January20, 2026
Tuesday, January 20, 2026
spot_img

ಗೊತ್ತಿಲ್ಲದವರ ಜತೆ ಮಾತಾಡಲ್ಲ ಎಂದ ಬಾಲಕಿ ಮೇಲೆ ಆಸಿಡ್‌ ದಾಳಿ ಮಾಡಿದ ಫೋಟೊಗ್ರಾಫರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಪರಿಚಿತರೊಂದಿಗೆ ನಾನು ಮಾತನಾಡುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ಫೋಟೊಗ್ರಾಫರ್ 14 ವರ್ಷದ ಬಾಲಕಿ ಮೇಲೆ ಆ್ಯಸಿಡ್ ಎರಡಚಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

9 ನೇ ತರಗತಿಯ ವಿದ್ಯಾರ್ಥಿನಿ ಶಾಲೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಮೂರು ದಿನಗಳ ಹುಡುಕಾಟದ ನಂತರ ಆ ವ್ಯಕ್ತಿಯನ್ನು ಬಂಧಿಸಲಾಗಿದೆ.

ಪೊಲೀಸ್ ತನಿಖೆಯ ಸಮಯದಲ್ಲಿ, ಆರೋಪಿ, ಚಂದ್ರರಾಮ್ ಮೇಘವಾಲ್ ಅವರ ಪುತ್ರ 19 ವರ್ಷದ ಓಂಪ್ರಕಾಶ್ ಅಲಿಯಾಸ್ ಜಾನಿ, ತಾನು ಫೋಟೊಗ್ರಾಫರ್ ಆಗಿ ಹೋಗಿದ್ದ ಮದುವೆಯಲ್ಲಿ ಆಕೆಯನ್ನು ನೋಡಿದ್ದಾಗಿ ಹೇಳಿದ್ದಾನೆ. ಸ್ವಲ್ಪ ದಿನಗಳ ನಂತರ ಓಂಪ್ರಕಾಶ್ ಹುಡುಗಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಆಕೆ ಕೋಪಗೊಂಡು ಗದರಿದ್ದಾಳೆ, ಅದು ಅವನಿಗೆ ನೋವುಂಟು ಮಾಡಿತ್ತು, ನಂತರ ಅವನು ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ.

ಶ್ರೀ ಗಂಗಾನಗರ ಜಿಲ್ಲೆಯ ಸುಭಾಷ್ ಪಾರ್ಕ್ ಪ್ರದೇಶದಲ್ಲಿ ತನ್ನ ಶಾಲೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಓಂಪ್ರಕಾಶ್ ಕಾರು ಚಲಾಯಿಸಿಕೊಂಡು ಹೋಗಿ ಆಕೆಯ ಮೇಲೆ ಆ್ಯಸಿಡ್ ಬಾಟಲಿ ಎಸೆದಿದ್ದಾನೆ. ಬಾಲಕಿಯ ಬಟ್ಟೆ ಮತ್ತು ಬೆರಳಿಗೆ ಸುಟ್ಟ ಗಾಯಗಳಾಗಿದ್ದರೂ, ದೊಡ್ಡ ದುರಂತವೊಂದು ತಪ್ಪಿದೆ. ಆರೋಪಿಯು ಆ್ಯಸಿಡ್ ದಾಳಿಗೆ ಯೋಜನೆ ರೂಪಿಸಿದ್ದಲ್ಲದೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹ ಸಿದ್ಧತೆ ನಡೆಸಿದ್ದ. ಮುಖವನ್ನು ಬಟ್ಟೆ ಮತ್ತು ಹೆಲ್ಮೆಟ್‌ನಿಂದ ಮುಚ್ಚಿಕೊಂಡು, ಬೈಕ್‌ನ ನಂಬರ್ ಪ್ಲೇಟ್ ಅನ್ನು ಮತ್ತೊಂದು ಬಟ್ಟೆಯಿಂದ ಸುತ್ತಿಕೊಂಡಿದ್ದ.

ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ, ಆದರೆ ಆರೋಪಿ ಮುಖ ಮತ್ತು ವಾಹನದ ನಂಬರ್ ಪ್ಲೇಟ್ ಅನ್ನು ಮುಚ್ಚಿಕೊಂಡಿದ್ದರಿಂದ, ಆ ವ್ಯಕ್ತಿಯನ್ನು ಗುರುತಿಸುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಬಹುಮಾನ ನೀಡುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಮೃತಾ ದುಹಾನ್ ಘೋಷಿಸಿದ್ದರು.

Must Read