ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ವಿರುದ್ಧದ ವಿಚಾರಣೆ ಮತ್ತೊಮ್ಮೆ ಮುಂದೂಡಿಕೆಯಾಗಿದೆ. ದರ್ಶನ್ ಪರ ವಕೀಲರು ಜೈಲಿನಲ್ಲಿನ ಸೌಲಭ್ಯಗಳ ಕೊರತೆಯನ್ನು ಉಲ್ಲೇಖಿಸಿ, ನ್ಯಾಯಾಧೀಶರು ಸ್ವತಃ ಪರಿಶೀಲನೆ ನಡೆಸಬೇಕೆಂದು ಮನವಿ ಮಾಡಿದ್ದರು. ಇದರ ಆಧಾರದ ಮೇಲೆ ಕೋರ್ಟ್ ಕಾನೂನು ಪ್ರಾಧಿಕಾರದ ಅಧಿಕಾರಿಗಳಿಗೆ ಸ್ಥಳಪರಿಶೀಲನೆ ಮಾಡಿ ವರದಿ ನೀಡುವಂತೆ ಆದೇಶಿಸಿತ್ತು
ಇದರನ್ವಯ ಅಧಿಕಾರಿಗಳು ಜೈಲಿಗೆ ಭೇಟಿನೀಡಿ ಜೈಲಿನಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಸಲ್ಲಿಸಬೇಕಾಗಿದ್ದ ವರದಿ ಇಂದು ಕೋರ್ಟ್‌ಗೆ ಸಲ್ಲಿಸಿದ್ದಾರೆ.
ಆದರೆ ಇಂದು ವರದಿ ಸಲ್ಲಿಕೆಯಾದರೂ, ದರ್ಶನ ಪರ ವಕೀಲರು ವರದಿಯ ಪ್ರತಿಯನ್ನು ಪಡೆಯಲು ಸಮಯಾವಕಾಶ ಕೋರಿದರು. ಹೀಗಾಗಿ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಲಾಗಿದೆ. ಆ ದಿನ ವರದಿ ಆಧಾರಿತವಾಗಿ ವಾದ–ಪ್ರತಿವಾದ ನಡೆಯಲಿದೆ.
ಇಂದು ಕೋರ್ಟ್ ಮುಂದೆ ಕೆಲವು ಆರೋಪಿಗಳು ನೇರವಾಗಿ ಹಾಜರಾಗಿದ್ದರೆ, ಕೆಲವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗವಹಿಸಿದರು. ಈ ವೇಳೆ ನಟ ದರ್ಶನ್ ಹಣೆಗೆ ಕುಂಕುಮ ಇಟ್ಟುಕೊಂಡು ಹಾಜರಾಗಿದ್ದು, ಪವಿತ್ರಾ ಗೌಡ ನಗುಮುಖದಿಂದ ವೀಡಿಯೋ ಮುಖಾಂತರ ಕಾಣಿಸಿಕೊಂಡರು.
ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 24ರಂದು ನಡೆಯಲಿದ್ದು, ವರದಿ ಆಧಾರದ ಮೇಲೆ ಕೋರ್ಟ್ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.