ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮಹತ್ವದ ಅಧ್ಯಾಯವೊಂದಕ್ಕೆ ಇಂದು ರಾಜಧಾನಿ ದೆಹಲಿಯಲ್ಲಿ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ‘ದಿ ಲೈಟ್ & ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್’ ಎಂಬ ಪಿಪ್ರಹ್ವಾ ರೆಲಿಕ್ಸ್ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಅಧಿಕೃತವಾಗಿ ಉದ್ಘಾಟಿಸಿದರು.
127 ವರ್ಷಗಳ ಬಳಿಕ ಭಾರತಕ್ಕೆ ಮರಳಿರುವ ಭಗವಾನ್ ಬುದ್ಧನ ಪಿಪ್ರಹ್ವಾ ರತ್ನದ ಅವಶೇಷಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. 1898ರಲ್ಲಿ ನಡೆದ ಉತ್ಖನನ ಹಾಗೂ 1971 ರಿಂದ 1975ರ ಅವಧಿಯಲ್ಲಿ ಪಿಪ್ರಹ್ವಾ ಪ್ರದೇಶದಲ್ಲಿ ಪತ್ತೆಯಾದ ಪವಿತ್ರ ಅವಶೇಷಗಳು ಮತ್ತು ರತ್ನಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.
ಇದನ್ನೂ ಓದಿ:
ಈ ಪ್ರದರ್ಶನವು ಭಾರತದ ಐತಿಹಾಸಿಕ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಪ್ರತೀಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಒಂದು ಶತಮಾನಕ್ಕೂ ಅಧಿಕ ಕಾಲದ ನಂತರ ಈ ಅಮೂಲ್ಯ ಅವಶೇಷಗಳನ್ನು ಮರಳಿ ತರುವ ಕಾರ್ಯ ಮಹತ್ವದ್ದಾಗಿದೆ ಎಂದು ತಿಳಿಸಿದ ಅವರು, ಇವುಗಳನ್ನು ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ ಎಂದು ವಿವರಿಸಿದ್ದಾರೆ.
ಭಗವಾನ್ ಬುದ್ಧನ ಶಾಂತಿ, ಕರುಣೆ ಮತ್ತು ಮಾನವೀಯತೆಯ ಸಂದೇಶಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಈ ಪ್ರದರ್ಶನ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಯುವಜನತೆ ಮತ್ತು ಭಾರತದ ಶ್ರೀಮಂತ ಸಂಸ್ಕೃತಿಯ ನಡುವಿನ ನಂಟನ್ನು ಬಲಪಡಿಸುವ ಪ್ರಯತ್ನ ಇದಾಗಿದೆ ಎಂದೂ ಹೇಳಿದ್ದಾರೆ. ಈ ಅವಶೇಷಗಳ ವಾಪಸಾತಿಗೆ ಶ್ರಮಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

