Wednesday, November 26, 2025

ಆಟವಾಡುತ್ತಿದ್ದ ಬಾಲಕನ ಮೇಲೆ ಪಿಟ್ ಬುಲ್ ನಾಯಿಯ ಅಟ್ಯಾಕ್ !

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಮನೆ ಹೊರಗೆ ಆಟವಾಡುತ್ತಿದ್ದ ಬಾಲಕನೊಬ್ಬನ ಮೇಲೆ ಏಕಾಏಕಿ ಪಿಟ್ ಬುಲ್ ನಾಯಿಯೊಂದು ದಾಳಿ ಮಾಡಿದ್ದ ಘಟನೆ ದೆಹಲಿಯ ಪ್ರೇಮ್ ನಗರ ಪ್ರದೇಶದಲ್ಲಿ ನಡೆದಿದೆ. ನಾಯಿ ದಾಳಿ ಮಾಡಿದ್ದ ಪರಿಣಾಮ ಬಾಲಕನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಭೀಕರ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ದೆಹಲಿಯ ಪ್ರೇಮ್ ನಗರ ಪ್ರದೇಶದ ವಿನಯ್ ಎನ್‌ಕ್ಲೇವ್‌ನಲ್ಲಿ ನವೆಂಬರ್ 23ರ ಸಂಜೆ 5.38ಕ್ಕೆ ಆರು ವರ್ಷದ ಬಾಲಕನ ಮೇಲೆ ಪಿಟ್ ಬುಲ್ ನಾಯಿ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಪರಿಣಾಮ ಬಾಲಕನ ಬಲ ಕಿವಿಯೂ ಮತ್ತು ಇತರ ದೇಹದ ಭಾಗಗಳಿಗೆ ತೀವ್ರ ಗಾಯವಾಗಿದೆ.

ಪಿಟ್ ಬುಲ್ ನಾಯಿ ಇದ್ದಕ್ಕಿದ್ದಂತೆ ಪಕ್ಕದ ಮನೆಯಿಂದ ಹೊರಬಂದು ಹುಡುಗನ ಮೇಲೆ ದಾಳಿ ಮಾಡಿದ್ದು, ಮಹಿಳೆಯ ಕೈಯಲ್ಲಿದ್ದ ಬೆಲ್ಟ್ ನಿಂದ ತಪ್ಪಿಸಿಕೊಂಡ ನಾಯಿ ಎದುರು ಮನೆಯ ಬಾಲಕನ ಮೇಲೆ ದಾಳಿ ಮಾಡಿದೆ. ಈ ವೇಳೆ ಮಹಿಳೆ ನಾಯಿಯನ್ನು ಹಿಡಿಯಲು ಪ್ರಯತ್ನ ಪಟ್ಟರು ಕೂಡ ಆಕೆಯ ಕೈಗೆ ನಾಯಿ ಸಿಗಲಿಲ್ಲ. ಬಾಲಕನನ್ನು ರಸ್ತೆ ತುಂಬಾ ಅಡ್ಡಾಡಿಸಿ ಕುತ್ತಿಗೆ, ಕೈ, ಕಿವಿಯ ಭಾಗಕ್ಕೆ ಕಚ್ಚಿದೆ. ಕಿವಿಯ ಭಾಗ ತೀವ್ರ ಗಾಯವಾಗಿದ್ದು ರಕ್ತಸ್ರಾವವಾಗಿದೆ.

ಕೊನೆಗೆ ಆ ಬಾಲಕನನ್ನು ನೆರೆ ಹೊರೆಯವರು ಮತ್ತು ಪೋಷಕರು ರಕ್ಷಿಸಿ ಬಿಎಸ್ಎ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಅಲ್ಲಿ ಹೆಚ್ಚಿನ ಚಿಕಿತ್ಸೆ ದೊರೆಯದ ಕಾರಣ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಆ ಬಾಲಕ ನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆ ಮಗುವಿನ ಪೋಷಕರು ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ನಾಯಿಯ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

error: Content is protected !!