Saturday, January 10, 2026

ಮಲಯಾಳಿ ಭಾಷಾ ಮಸೂದೆ ಜಾರಿಗೆ ಪ್ಲಾನ್: ಕೇರಳ ಸರಕಾರದ ವಿರುದ್ಧ ಸಿಡಿದೆದ್ದ ಕನ್ನಡಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ‘ಮಲಯಾಳ ಭಾಷಾ ಮಸೂದೆ 2025’ಗೆ ಅನುಮೋದನೆ ಪಡೆಯಲಾಗಿದೆ. ಇದು ಕಾನೂನಾಗಿ ಜಾರಿಗೊಂಡಲ್ಲಿ ಕರ್ನಾಟಕ ಗಡಿಭಾಗದ ಕಾಸರಗೋಡು ಮತ್ತು ಮಂಜೇಶ್ವರ ಪ್ರದೇಶದ ಕನ್ನಡ ಭಾಷೆಯ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಕೇರಳ ಸರ್ಕಾರದ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮಸೂದೆ ವಾಪಸ್ ಪಡೆಯುವಂತೆ ಕೇರಳ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಲಯಾಳ ಭಾಷಾ ಮಸೂದೆಯಲ್ಲೇನಿದೆ?
‘ಮಲಯಾಳ ಭಾಷಾ ಮಸೂದೆ 2025’ ಇದು ಕೇರಳದಾದ್ಯಂತ ಮಲಯಾಳವನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸುವ ಮಸೂದೆ. 1 ರಿಂದ 10 ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಯೂ ಸೇರಿದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯಗೊಳಿಸುವುವ ಬಗ್ಗೆ ಮಸೂದೆಯಲ್ಲಿ ಉಲ್ಲೇಖವಾಗಿದೆ.

2016 ರಲ್ಲಿ ಮಂಡಿಸಲಾದ ಈ ಮಸೂದೆಯನ್ನು ಭಾಷಾ ಅಲ್ಪಸಂಖ್ಯಾತರಿಗೆ ವಿರುದ್ದವಾಗಿದೆ ಎಂದು ಅಂದಿನ ರಾಜ್ಯಪಾಲರು ತಿರಸ್ಕರಿಸಿದ್ದರು. ಬಳಿಕ ಮಸೂದೆಯಲ್ಲಿ ಕೆಲ ತಿದ್ದುಪಡಿ ಮಾಡಿರುವ ಕೇರಳ ಸರ್ಕಾರ, ಭಾಷಾ ಅಲ್ಪಸಂಖ್ಯಾತರ ಹಿತ ರಕ್ಷಿಸುತ್ತೇವೆಂದು ವಾದಿಸಿ ಮಸೂದೆ ಜಾರಿಗೆ ಮುಂದಾಗಿದೆ.

ಮಲಯಾಳ ಭಾಷಾ ಮಸೂದೆಗೆ ಕರ್ನಾಟಕದ ವಿರೋಧ ಏಕೆ?
ಈ ಮಸೂದೆಯಿಂದ ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂಬುದು ಕರ್ನಾಟಕದ ವಾದ. ಅಂದರೆ, ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳು ಕೂಡ ಇಷ್ಟವಿಲ್ಲದಿದ್ದರೂ ಮಲಯಾಳವನ್ನು ಪ್ರಥಮ ಭಾಷೆಯನ್ನಾಗಿ ಕಲಿಯಬೇಕಾಗುತ್ತದೆ. ಇದು ಮಲಯಾಳ ಹೇರಿಕೆಯಾಗುತ್ತದೆ ಎಂಬುದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕನ್ನಡಿಗರ ಆತಂಕ. ಇದು ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ. ಸಂವಿಧಾನ ನೀಡಿರುವ ಭಾಷೆಯ ಹಕ್ಕಿನ ಉಲ್ಲಂಘನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಕನ್ನಡ ನಾಡು, ನುಡಿ ಹಾಗೂ ಭಾಷೆಗೆ ಕಾಸರಗೋಡಿನಲ್ಲಿರುವ ಕನ್ನಡಿಗರ ಕೊಡುಗೆಯೂ ಸಾಕಷ್ಟಿದೆ. ಕೇರಳದಲ್ಲಿ ಮಲಯಾಳ ಭಾಷಾ ಮಸೂದೆ ತರಲು ಮುಂದಾಗಿರುವುದು ಗಡಿ ಭಾಗದ ಕನ್ನಡಿಗರಿಗೆ ಕುತ್ತು ತರಲಿದೆ. ಕಾಸರಗೋಡು ಜಿಲ್ಲೆಯಲ್ಲಿ 194ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿವೆ. ಒಂದು ವೇಳೆ ಮಲಯಾಳ ಭಾಷಾ ಮಸೂದೆ ಮಂಡನೆಯಾದರೆ, ಕನ್ನಡ ಮಾಧ್ಯಮ ಶಾಲೆಗಳ ಮಲಯಾಳೀಕರಣವಾಗಲಿದೆ ಎಂಬ ಆತಂಕ ಎದುರಾಗಿದೆ.

ಸಿದ್ದರಾಮಯ್ಯ ಹೇಳಿದ್ದೇನು?
ಯಾವುದೇ ಒಂದು ಭಾಷೆ ಮತ್ತೊಂದು ಭಾಷೆಯ ವಿರುದ್ಧವಾಗಿ ಇರುವುದಿಲ್ಲ. ಭಾರತ ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಧರ್ಮದ ತೊಟ್ಟಿಲು. ಈ ಬಹುತ್ವದ ವಾತಾವರಣಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ ಅಪಾಯಕಾರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಕಾಸರಗೋಡಿನ ಜನ ಹಲವು ತಲೆಮಾರುಗಳಿಂದ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ, ನಿತ್ಯದ ಬದುಕಿನಲ್ಲಿ ಕನ್ನಡವನ್ನು ನಿರಂತರವಾಗಿ ಬಳಸುತ್ತಾ ಬಂದಿದ್ದಾರೆ. ಕಾಸರಗೋಡು ಜಿಲ್ಲೆಯ ಶೇಕಡಾ 70ರಷ್ಟು ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಮತ್ತು ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದನ್ನು ಬಯಸುತ್ತಾರೆ ಎಂದೂ ಹೇಳಿದ್ದಾರೆ.

‘ಕೇರಳದ‌ ಗಡಿ ಜಿಲ್ಲೆಯಲ್ಲಿ‌ ವಾಸ ಮಾಡುತ್ತಿರುವ ಜನರ ಮನಸ್ಸು ಸಂಪೂರ್ಣ ಕನ್ನಡ‌‌ ಭಾಷೆಯೊಂದಿಗೆ ಬೆರೆತು ಹೋಗಿದೆ. ಕೇರಳದಲ್ಲಿ ಸುಮಾರು 202 ಕನ್ನಡ ಮಾಧ್ಯಮ ಶಾಲೆಗಳಿವೆ. ನಾನೇ ಒಂದೂವರೆ ವರ್ಷದ ಹಿಂದೆ ಎಡನೀರು ಮಠಕ್ಕೆ ಭೇಟಿ ನೀಡಿ ಆ ಮಠ ನಿರ್ವಹಣೆ ಮಾಡುತ್ತಿರುವ ಕನ್ನಡ ಶಾಲಾ ಕಾರ್ಯಕ್ರಮದಲ್ಲಿ‌ ಭಾಗವಹಿಸಿದ್ದೆ. ಕಾಸರಗೋಡಿನ‌ ಜನರ ಮನಸ್ಸು, ಜೀವನ ಸಂಪೂರ್ಣ ಕನ್ನಡ ಭಾಷಾಮಯವಾಗಿದೆ. ಅಲ್ಲಿನ ಕನ್ನಡ ಭಾಷಾ ಬಳಕೆ‌ ನೋಡಿದ ನನಗೆ ಕೇರಳಕ್ಕೆ ಭೇಟಿ ನೀಡಿದ್ದೆ ಎಂದು ಅನಿಸಲೇ ಇಲ್ಲ. ಹೀಗಿದ್ದು, ಕೇರಳ ಸರ್ಕಾರ ಇಂತಹ ಮಸೂದೆ ಜಾರಿಗೆ ತಂದಿರುವುದು ಸರಿಯಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಅಲ್ಲದೆ, ಕೇರಳ ಸರ್ಕಾರ ಮಸೂದೆ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

error: Content is protected !!