ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಫ್ಲೋರಿಡಾ ರಾಜ್ಯದ ಬ್ರೆವರ್ಡ್ ಕೌಂಟಿಯಲ್ಲಿ ಜನಸಂದಣಿ ತುಂಬಿದ್ದ ಇಂಟರ್‌ಸ್ಟೇಟ್–95 ಹೆದ್ದಾರಿಯಲ್ಲೇ ಸಣ್ಣ ವಿಮಾನ ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಒಂದೇ ಕ್ಷಣದಲ್ಲಿ ಸಂಭವಿಸಿದ ಈ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ಆತಂಕ ಮೂಡಿಸಿದೆ. ನಿನ್ನೆ ಸಂಜೆ ಸುಮಾರು 5.45ರ ವೇಳೆಗೆ ಸೆಸ್ನಾ–172 ಮಾದರಿಯ ಸಣ್ಣ ವಿಮಾನವೊಂದು ಎಂಜಿನ್ ತಾಂತ್ರಿಕ ದೋಷದಿಂದ ಯುವ ಪೈಲಟ್ ಸಮೀಪದ ವಿಮಾನ ನಿಲ್ದಾಣ ತಲುಪುವ ಸಾಧ್ಯತೆಯಿಲ್ಲದೆ ಹೆದ್ದಾರಿಯಲ್ಲೇ ಇಳಿಯಲು ನಿರ್ಧರಿಸಿದ್ದರು. ಆದರೆ ಲ್ಯಾಂಡಿಂಗ್ ಸುಗಮವಾಗದೆ, ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದರ ಮೇಲ್ಭಾಗಕ್ಕೆ ವಿಮಾನದ ರೆಕ್ಕೆ ಡಿಕ್ಕಿಯಾಯಿತು. ಡಿಕ್ಕಿಯಿಂದ ಕಾರು ಸುಮಾರು 50 ಅಡಿ ದೂರ ಎಸೆಲ್ಪಟ್ಟಿದೆ.
ಅಪಘಾತದಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದಲ್ಲಿದ್ದ ಪೈಲಟ್ ಹಾಗೂ ಸಹ ಪ್ರಯಾಣಿಕ ಇಬ್ಬರೂ ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ. ಮಾಹಿತಿ ಪಡೆದ ತಕ್ಷಣ ಫ್ಲೋರಿಡಾ ಹೈವೇ ಪೆಟ್ರೋಲ್ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿತು.

