ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಪತನಗೊಂಡ ಘಟನೆ ವೆನೆಜುವೆಲಾದ ಪಾರಾಮಿಲ್ಲೋ ವಿಮಾನ ನಿಲ್ದಾಣದಲ್ಲಿ ನಡೆದಿದೆ. PA-31T1 ವಿಮಾನ ರನ್‌ವೇನಿಂದ ಮೇಲಕ್ಕೆ ಹಾರಿದ ಬೆನ್ನಲ್ಲೇ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಕೆಲವೇ ಕ್ಷಣದಲ್ಲಿ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಟ್ವಿನ್ ಎಂಜಿನ್ ಪೈಪರ್ PA-31T1 ವಿಮಾನ ಸ್ಥಳೀಯ ಸಮಯದ ಪ್ರಕಾರ 9.52 AM ಗೆ ರನ್‌ವೇನಲ್ಲಿ ವೇಗವಾಗಿ ಸಾಗಿತ್ತು. ರನ್‌ವೇಯಿಂದ ಟೇಕ್ ಆಫ್ ಆದ ಬೆನ್ನಲ್ಲೇ ವಿಮಾನ ನಿಯಂತ್ರಣ ಕಳೆದುಕೊಂಡಿದೆ. ನೇರವಾಗಿ ಸಾಗಬೇಕಿದ್ದ ವಿಮಾನ ಸಂಪೂರ್ಣವಾಗಿ ಉಲ್ಟಾ ಆಗಿದೆ. ಬಳಿಕ ರನ್‌ವೇನಲ್ಲೇ ನೆಲಕ್ಕೆ ಅಪ್ಪಳಿಸಿದೆ. ವಿಮಾನ ಪತನಗೊಳ್ಳುತ್ತಿದ್ದಂತೆ ಭರ್ತಿಯಾಗಿದ್ದ ಇಂಧನ ಟ್ಯಾಂಕ್ ಸ್ಫೋಟಗೊಂಡಿದೆ. ಬೆಂಕಿ ಹೊತ್ತಿಕೊಂಡು ಕೆಲವೇ ಕ್ಷಣದಲ್ಲಿ ಭಸ್ಮವಾಗಿದೆ.
ವಿಮಾನ ನೇರವಾಗಿ ದೂರದಲ್ಲಿ ನಿಂತಿದ್ದವರತ್ತ ತಿರುಗಿದೆ. ಈ ವೇಳೆ ಹಲವರು ಚೀರಾಡಿದ್ದಾರೆ. ಕೆಲವೇ ಕ್ಷಣದಲ್ಲಿ ವಿಮಾನವೇ ಭಸ್ಮವಾಗಿದೆ. ಸಿವಿಲ್ ಏರೋನಾಟಿಕ್ಸ್ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ. ಈ ವಿಮಾನದಲ್ಲಿ ಕೇವಲ ಇಬ್ಬರು ಮಾತ್ರ ಇದ್ದರು. ಪೈಲೆಟ್ ಹಾಗೂ ಕೋ ಪೈಲೆಟ್ ಇಬ್ಬರೇ ಇದ್ದರು. ಇಬ್ಬರು ವಿಮಾನ ಪತನದಲ್ಲಿ ಮೃತಪಟ್ಟಿದ್ದಾರೆ.
PA-31T1 ವಿಮಾನ ಪತನದ ಕುರಿತು ತನಿಖೆ ನಡೆಯುತ್ತಿದೆ. ರನ್‌ವೇನಲ್ಲಿ ವಿಮಾನದ ಟೈಯರ್ ಸ್ಫೋಟಗೊಂಡಿರುವ ಕಾರಣ ಸರಿಯಾಗಿ ಟೇಕ್ ಆಫ್ ಆಗಿಲ್ಲ. ಹೀಗಾಗಿ ನಿಯಂತ್ರಣ ಕಳೆದುಕೊಂಡು ವಿಮಾನ ಪತನಗೊಂಡಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿದೆ.

