ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಒಕ್ಲಾಹೊಮಾ ನಗರದಲ್ಲಿ ಭಯಾನಕ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಮಿಲಿಟರಿ ತರಬೇತಿ ವಿಮಾನವೊಂದು ಹಾರಾಟದ ವೇಳೆ ತಾಂತ್ರಿಕ ದೋಷ ಉಂಟಾಗಿ ಹೆದ್ದಾರಿಯಲ್ಲೇ ತುರ್ತು ಲ್ಯಾಂಡಿಂಗ್ ಮಾಡಿದೆ. ಈ ಘಟನೆಯ ವೇಳೆ ರಸ್ತೆ ಸಂಚಾರ ನಡೆಯುತ್ತಿದ್ದರೂ, ಯಾವುದೇ ಅಪಾಯ ಉಂಟಾಗದೇ ವಿಮಾನ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ.
ಮಾಹಿತಿಯ ಪ್ರಕಾರ, ವಿಮಾನದ ಎಂಜಿನ್‌ನಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ ಉಂಟಾಗಿ ಎಂಜಿನ್ ಫೈಲ್ಯೂರ್ ಸಂಭವಿಸಿತು. ಹತ್ತಿರದಲ್ಲೇ ಯಾವುದೇ ವಿಮಾನ ನಿಲ್ದಾಣ ಅಥವಾ ಏರ್‌ಬೇಸ್ ಇಲ್ಲದ ಕಾರಣ ಪೈಲೆಟ್ ತಕ್ಷಣ ನಿರ್ಧಾರ ತೆಗೆದುಕೊಂಡು ಹೆದ್ದಾರಿಯನ್ನೇ ಲ್ಯಾಂಡಿಂಗ್ ಟ್ರ್ಯಾಕ್ ಆಗಿ ಬಳಸಿದರು. ಪೈಲೆಟ್‌ರ ತ್ವರಿತ ನಿರ್ಧಾರದಿಂದ ಭೀಕರ ಪತನವೊಂದು ತಪ್ಪಿದೆ.
ಈ ವೇಳೆ ಅದೇ ರಸ್ತೆಯಲ್ಲಿ ವೇಗವಾಗಿ ಸಾಗುತ್ತಿದ್ದ ಟೆಸ್ಲಾ ಕಾರಿನ ಚಾಲಕ ಮ್ಯಾಥ್ಯೂ ಟೊಪಿಚಾನ್ ಕೆಲ ಕ್ಷಣಗಳ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದಾರೆ. “ನಾನು ವೇಗವಾಗಿ ಕಾರು ಓಡಿಸುತ್ತಿದ್ದೆ. ಇದ್ದಕ್ಕಿದ್ದಂತೆ ವಿಮಾನ ನನ್ನ ಮುಂದೆ ಇಳಿಯಿತು. ಎಲ್ಲವೂ ಮುಗಿದೇ ಹೋಯಿತು ಎಂದುಕೊಂಡೆ, ಆದರೆ ಅದೃಷ್ಟದಿಂದ ಪಾರಾದೆ,” ಎಂದು ಮ್ಯಾಥ್ಯೂ ಹೇಳಿಕೊಂಡಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ಅದನ್ನು “ಎಐ ಜನರೇಟ್ ಮಾಡಿದ ದೃಶ್ಯ” ಎಂದು ಶಂಕಿಸಿದ್ದಾರೆ. ಆದರೆ ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ, ಇದು ನಿಜವಾದ ಘಟನೆ ಆಗಿದ್ದು, ಮಿಲಿಟರಿ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ.

