February 25, 2026
Wednesday, February 25, 2026
spot_img

ಬ್ಯಾಟ್-ಬಾಲ್ ಬಿಟ್ಟು ಜಗಳಕ್ಕೆ ನಿಂತ ಆಟಗಾರರು: ರಣಜಿ ಕದನದಲ್ಲಿ ಹೈವೋಲ್ಟೇಜ್ ಡ್ರಾಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ ನಡುವಿನ ರಣಜಿ ಟ್ರೋಫಿ ಫೈನಲ್ ಪಂದ್ಯವು ಕೇವಲ ಬ್ಯಾಟ್-ಬಾಲ್ ಸದ್ದಿನಿಂದಷ್ಟೇ ಅಲ್ಲದೆ, ಆಟಗಾರರ ನಡುವಿನ ಕಿತ್ತಾಟದಿಂದಲೂ ಸುದ್ದಿಯಾಗಿದೆ.

ಪಂದ್ಯದ ಎರಡನೇ ದಿನದಾಟದಲ್ಲಿ ಜೆಕೆ ತಂಡದ ನಾಯಕ ಪರಾಸ್ ಡೋಗ್ರಾ ಹಾಗೂ ಕರ್ನಾಟಕದ ಫೀಲ್ಡರ್ ಅನೀಶ್ ಕೆವಿ ನಡುವೆ ನಡೆದ ‘ಹೆಡ್‌ಬಟ್’ (ತಲೆಯಿಂದ ಡಿಚ್ಚಿ ಹೊಡೆಯುವ) ಘಟನೆ ಕ್ರೀಡಾ ಸ್ಫೂರ್ತಿಗೆ ಮಸಿ ಬಳಿಯುವಂತಿದೆ.

ಜಮ್ಮು-ಕಾಶ್ಮೀರದ ಇನ್ನಿಂಗ್ಸ್‌ನ 100ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ವೇಳೆ ಈ ಹೈಡ್ರಾಮಾ ಶುರುವಾಯಿತು. ಪರಾಸ್ ಡೋಗ್ರಾ ಹೊಡೆದ ಚೆಂಡು ಬೌಂಡರಿ ಗೆರೆ ದಾಟುತ್ತಿದ್ದಂತೆ, ಸಿಲ್ಲಿ ಪಾಯಿಂಟ್‌ನಲ್ಲಿದ್ದ ಅನೀಶ್ ಕೆವಿ ಹಾಗೂ ಡೋಗ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಕ್ಷಣಾರ್ಧದಲ್ಲಿ ಆವೇಶಕ್ಕೊಳಗಾದ ಪರಾಸ್ ಡೋಗ್ರಾ, ಅನೀಶ್ ಅವರ ತಲೆಗೆ ಡಿಚ್ಚಿ ಹೊಡೆದಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಕರ್ನಾಟಕದ ಮಾಜಿ ನಾಯಕ ಮಯಾಂಕ್ ಅಗರ್ವಾಲ್, ಕೂಡಲೇ ಧಾವಿಸಿ ಡೋಗ್ರಾ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಅಂಪೈರ್‌ಗಳು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು. ಕರ್ನಾಟಕದ ನಾಯಕ ದೇವದತ್ ಪಡಿಕ್ಕಲ್ ಅವರಿಗೂ ಶಿಸ್ತು ಕಾಪಾಡುವಂತೆ ಅಂಪೈರ್‌ಗಳು ಎಚ್ಚರಿಕೆ ನೀಡಿದರು. ಪಂದ್ಯದ ಅಂತ್ಯದಲ್ಲಿ ಡೋಗ್ರಾ ಕ್ಷಮೆ ಕೇಳಲು ಮುಂದಾದರೂ, ಅನೀಶ್ ಅದನ್ನು ಸ್ವೀಕರಿಸಲು ನಿರಾಕರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !