ಹೊಸದಿಗಂತ ಡಿಜಿಟಲ್ ಡೆಸ್ಕ್
ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಯಣ ರೋಚಕ ಹಂತಕ್ಕೆ ತಲುಪಿದೆ. ಸತತ 5 ಪಂದ್ಯಗಳನ್ನು ಗೆದ್ದು ಬೀಗಿದ್ದ ಆರ್ಸಿಬಿ, ಕಳೆದ ಎರಡು ಪಂದ್ಯಗಳಲ್ಲಿ ಎಡವಿದರೂ ಫೈನಲ್ ತಲುಪುವ ರೇಸ್‌ನಲ್ಲಿ ಇನ್ನೂ ಮುಂಚೂಣಿಯಲ್ಲಿದೆ.
ಇಂದು ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿ ಮಹತ್ವದ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಬೆಂಗಳೂರು ತಂಡ ಜಯ ಸಾಧಿಸಿದರೆ, ಒಟ್ಟು 12 ಅಂಕಗಳೊಂದಿಗೆ ಯಾವುದೇ ಗೊಂದಲವಿಲ್ಲದೆ ನೇರವಾಗಿ ಫೈನಲ್ ಟಿಕೆಟ್ ಪಡೆಯಲಿದೆ.
ಒಂದು ವೇಳೆ ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿ ಸೋತರೂ ಫೈನಲ್ ತಲುಪುವ ಅವಕಾಶ ಜೀವಂತವಾಗಿದೆ. ಸದ್ಯ ಆರ್ಸಿಬಿ ತಂಡವು +0.947 ನಷ್ಟು ಅತ್ಯುತ್ತಮ ನೆಟ್ ರನ್ ರೇಟ್ ಹೊಂದಿದ್ದು, ಇದು ಉಳಿದ ತಂಡಗಳಿಗಿಂತ ಬಹಳ ಮುಂದಿದೆ.
ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಗುಜರಾತ್ ತಂಡದ ನೆಟ್ ರನ್ ರೇಟ್ -0.271 ರಷ್ಟಿದೆ.
ಆರ್ಸಿಬಿ ತಂಡವನ್ನು ಹಿಂದಿಕ್ಕಬೇಕಾದರೆ, ಗುಜರಾತ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಬರೋಬ್ಬರಿ 160 ರನ್ಗಳ ಅಂತರದಿಂದ ಗೆಲ್ಲಬೇಕು ಮತ್ತು ಆರ್ಸಿಬಿ ದೊಡ್ಡ ಅಂತರದಿಂದ ಸೋಲಬೇಕು. ಬಲಿಷ್ಠ ಮುಂಬೈ ಎದುರು ಇಷ್ಟು ದೊಡ್ಡ ಜಯ ಅಸಾಧ್ಯವೆಂದೇ ಹೇಳಬಹುದು.
ಹೀಗಾಗಿ, ಇಂದಿನ ಪಂದ್ಯದಲ್ಲಿ ಆರ್ಸಿಬಿ ಹೀನಾಯವಾಗಿ ಸೋಲದಿದ್ದರೆ ಸಾಕು, ನೆಟ್ ರನ್ ರೇಟ್ ಬಲದೊಂದಿಗೆ ಮಂಧಾನ ಪಡೆ ಫೈನಲ್ ಮೆಟ್ಟಿಲೇರುವುದು ಬಹುತೇಕ ಖಚಿತವಾಗಿದೆ.



