ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ 42,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹೊಸ ಪ್ರಾಜೆಕ್ಟ್, ಸ್ಕೀಮ್ಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ನಡೆದ ವಿಶೇಷ ಕೃಷಿ ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿಯವರು ಕೃಷಿ ವಲಯದಲ್ಲಿ ಎರಡು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಿದರು. ಇವುಗಳಿಗೆ 35,440 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಪ್ರಧಾನಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯೂ ಸೇರಿದೆ, ಈ ಯೋಜನೆಯ ಮೌಲ್ಯ 24,000 ಕೋಟಿ ರೂ. ಆಗಿದೆ.
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆ ಹೆಚ್ಚಿಸುವುದು, ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಕೊಯ್ಲಿನ ನಂತರದ ಸಂಗ್ರಹಣೆ ಹೆಚ್ಚಿಸುವುದು, ನೀರಾವರಿ ಸೌಲಭ್ಯಗಳನ್ನು ಸುಧಾರಿಸುವುದು ಮತ್ತು ಆಯ್ದ 100 ಜಿಲ್ಲೆಗಳಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿ ಸಾಲದ ಲಭ್ಯತೆ ಸುಗಮಗೊಳಿಸುವ ಉದ್ದೇಶವನ್ನು ಇದು ಹೊಂದಿದೆ ಎಂದು ಪ್ರಧಾನಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಯೋಜನೆಗಳು ಕಡಿಮೆ ಉತ್ಪಾದಕತೆ ಇರುವ 100 ಜಿಲ್ಲೆಗಳಲ್ಲಿ ಇಳುವರಿಯನ್ನು ಹೆಚ್ಚಿಸುವ ಪ್ರಯತ್ನಗಳನ್ನು ಬಲಪಡಿಸುವುದಲ್ಲದೇ, ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ವೇಗಗೊಳಿಸುತ್ತವೆ. ಇದು ನಮ್ಮ ರೈತ ಸಹೋದರ, ಸಹೋದರಿಯರ ಜೀವನವನ್ನು ಸಮೃದ್ಧಿಗೊಳಿಸುವುದಷ್ಟೇ ಅಲ್ಲದೆ, ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತಕ್ಕಾಗಿ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದಲ್ಲದೇ ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ 5,450 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಚಾಲನೆ ಕೊಟ್ಟರು, ಜೊತೆಗೆ ಸುಮಾರು 815 ಕೋಟಿ ರೂ.ಗಳ ಹೆಚ್ಚುವರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಇಂದು ಉದ್ಘಾಟನೆಗೊಂಡ ಯೋಜನೆಗಳಲ್ಲಿ ಬೆಂಗಳೂರು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಫಿಷಿಯಲ್ ಇನ್ಸೆಮಿನೇಷನ್ ಟ್ರೈನಿಂಗ್ ಸೆಂಟರ್, ಅಮ್ರೇಲಿ ಮತ್ತು ಬನಾಸ್‌ನಲ್ಲಿ ಶ್ರೇಷ್ಠತಾ ಕೇಂದ್ರ, ರಾಷ್ಟ್ರೀಯ ಗೋಕುಲ್ ಮಿಷನ್ ಅಡಿ ಅಸ್ಸಾಂನಲ್ಲಿ ಐವಿಎಫ್ ಲ್ಯಾಬ್ ಸ್ಥಾಪನೆ, ಇಂದೋರ್‌ನ ಮೆಹ್ಸಾನಾ ಮತ್ತು ಭಿಲ್ವಾರಾದಲ್ಲಿ ಹಾಲಿನ ಪುಡಿ ಘಟಕಗಳ ಸ್ಥಾಪನೆ, ಅಸ್ಸಾಂನ ತೇಜ್‌ಪುರದಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನು ಆಹಾರ ಘಟಕ ಸ್ಥಾಪನೆ, ಕೃಷಿ ಸಂಸ್ಕರಣಾ ಕ್ಲಸ್ಟರ್‌ಗಳಿಗೆ ಮೂಲಸೌಕರ್ಯ ಒದಗಿಸುವುದು ಸೇರಿದೆ.
ಶಂಕುಸ್ಥಾಪನೆಗೊಂಡ ಯೋಜನೆಗಳು
ಪ್ರಧಾನ ಮಂತ್ರಿ ಮೋದಿ ಅವರು ಆಂಧ್ರ ಪ್ರದೇಶದ ಕೃಷ್ಣಾದಲ್ಲಿ ಇಂಟಿಗ್ರೇಟೆಡ್ ಕೋಲ್ಡ್ ಚೈನ್ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯ (ವಿಕಿರಣ), ಉತ್ತರಾಖಂಡದಲ್ಲಿ ಟ್ರೌಟ್ ಮೀನುಗಾರಿಕೆ, ನಾಗಾಲ್ಯಾಂಡ್‌ನಲ್ಲಿ ಇಂಟಿಗ್ರೇಟೆಡ್ ಅಕ್ವಾ ಪಾರ್ಕ್, ಪುದುಚೇರಿಯ ಕಾರೈಕಲ್‌ನಲ್ಲಿ ಸ್ಮಾರ್ಟ್ ಮತ್ತು ಇಂಟಿಗ್ರೇಟೆಡ್ ಫಿಶಿಂಗ್ ಹಾರ್ಬರ್ ಮತ್ತು ಒಡಿಶಾದ ಹಿರಾಕುಡ್‌ನಲ್ಲಿ ಅತ್ಯಾಧುನಿಕ ಇಂಟಿಗ್ರೇಟೆಡ್ ಅಕ್ವಾಪಾರ್ಕ್ ಸೇರಿದಂತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.