February 9, 2026
Monday, February 9, 2026
spot_img

ಪ್ರಧಾನಿ ಮೋದಿ ಲೋಕಸಭೆಗೆ ಗೈರಾಗಿರುವುದು ನಾಚಿಕೆಗೇಡಿನ ಸಂಗತಿ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸದೆ ಪ್ರಧಾನಿ ನರೇಂದ್ರ ಮೋದಿ ತಪ್ಪಿಸಿಕೊಂಡಿರುವುದು ಸಂಸತ್‌ಗೆ ತೋರಿಸಿರುವ ಅಗೌರವ ಮಾತ್ರವಲ್ಲ, ಸತ್ಯವನ್ನು ಎದುರಿಸಲಾಗದ ಹೇಡಿತನದ ಪರಮಾವಧಿ ಎಂದು ಟೀಕಿಸಿದ್ದಾರೆ.

ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನಿಯ ಉತ್ತರ ಇಲ್ಲದೆ ವಂದನಾ ನಿರ್ಣಯವನ್ನು ಅಂಗೀಕರಿಸಲಾಗಿದೆ. ಓರ್ವ ಪ್ರಧಾನಿ ಸಂಸತ್ತನ್ನು ನಿರ್ಲಕ್ಷಿಸುವುದೆಂದರೆ ಜವಾಬ್ದಾರಿಯಿಂದ ತಪ್ಪಿಸಿಕೊಂಡಂತೆ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಡಳಿತರೂಢ ಬಿಜೆಪಿ ಪಕ್ಷ ಮೊದಲು ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡದೆ ತಡೆಯಿತು, ನಂತರ ತಾನೂ ಕೂಡಾ ಮಾತನಾಡದೆ ಮೌನಕ್ಕೆ ಶರಣಾಯಿತು. ಇದು ಬಹಳ ಆತಂಕಕಾರಿ ಬೆಳವಣಿಗೆ. ರಾಹುಲ್ ಗಾಂಧಿ ಅವರು ತಮ್ಮ ವಂದನಾ ನಿರ್ಣಯದ ಭಾಷಣದಲ್ಲಿ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಅವರ ಪುಸ್ತಕದಲ್ಲಿದ್ದ ದೇಶದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಲು ಮುಂದಾದಾಗ ಅವರ ಮಾತನ್ನು ಸಂಪೂರ್ಣವಾಗಿ ತಡೆಯಲಾಯಿತು ಎಂದಿದ್ದಾರೆ.

ಆ ಪುಸ್ತಕದಲ್ಲಿ 2020ರ ಚೀನಾ ಗಡಿ ಸಂಘರ್ಷದ ಸಂದರ್ಭ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರು ಸೇನಾ ಮುಖ್ಯಸ್ಥರಿಗೆ ಕೇವಲ ”ಜೋ ಉಚಿತ್ ಸಮಝೋ, ವೋಹ್ ಕರೋ” (ನಿಮಗೆ ಯೋಗ್ಯವೆನಿಸಿದ್ದನ್ನು ಮಾಡಿ) ಎಂದು ಹೇಳಿದ್ದಾಗಿ ದಾಖಲಾಗಿದೆ. ಇದು ಪ್ರಧಾನಿ ಮೋದಿಯವರ ನಾಯಕತ್ವದ ಟೊಳ್ಳುತನವನ್ನು ಜಗಜ್ಜಾಹೀರುಗೊಳಿಸಿರುವುದು ಮಾತ್ರವಲ್ಲ, ಮೋದಿ ತಾನೇ ಕಟ್ಟಿಕೊಂಡಿರುವ 56 ಇಂಚಿನ ಎದೆಯೊಳಗಿನ ಪುಕ್ಕಲುತನವನ್ನು ಬಯಲು ಮಾಡಿದೆ.

ಪ್ರಧಾನಿಯವರ ಈ ಪಲಾಯನವಾದಿ ನಡೆಯು ಸಂಸತ್ತಿನಲ್ಲಿ ಚರ್ಚೆ ಆಗಬಾರದೆಂಬ ಕಾರಣಕ್ಕೆ ರಾಹುಲ್ ಗಾಂಧಿಯವರು ಭಾಷಣ ಮಾಡದಂತೆ ತಡೆಯಲಾಗಿದೆ. ದೇಶದ ಬಹುಸಂಖ್ಯೆಯ ಜನರನ್ನು ಪ್ರತಿನಿಧಿಸುವ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇಂತಹ ಗಂಭೀರ ಪ್ರಶ್ನೆಗಳನ್ನು ಎದುರಿಸುವ ಬದಲು ಪ್ರಧಾನಿ ಮೋದಿ ಅವರು ಲೋಕಸಭೆಗೆ ಗೈರಾಗಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !