Saturday, October 11, 2025

ಚಡಚಣ ಎಸ್‌ಬಿಐ ಬ್ಯಾಂಕ್ ದರೋಡೆಕೋರರ ಹೆಡೆಮುರಿ ಕಟ್ಟಿದ ಪೊಲೀಸರು

ಹೊಸದಿಗಂತ ವರದಿ ವಿಜಯಪುರ:

ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕ್‌ನಲ್ಲಿ ಬಹುಕೋಟಿ ರೂ.ಗಳ ಚಿನ್ನಾಭರಣ, ನಗದು ಕಳ್ಳತನ ಘಟನೆ ಬಳಿಕ ಮತ್ತೊಮ್ಮೆ ತಲ್ಲಣ ಮೂಡಿಸಿದ ಚಡಚಣ ಎಸ್‌ಬಿಐ ಬ್ಯಾಂಕ್‌ನ 20 ಕೋಟಿ ಮೌಲ್ಯ ಚಿನ್ನಾಭರಣ ದರೋಡೆ ಪ್ರಕರಣದ 4 ಜನ ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದು, ಅವರಿಂದ 9.1 ಕೆಜಿ ಚಿನ್ನ, 86,31,220 ರೂ.ಗಳನ್ನು ಜಪ್ತಿ ಮಾಡಿದ್ದಾರೆ.

ಚಡಚಣ ಎಸ್‌ಬಿಐ ಬ್ಯಾಂಕ್‌ನಲ್ಲಿ ಕಳೆದ ಸೆ.16, 2025 ರಂದು ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ, ಕೈ, ಕಾಲು ಕಟ್ಟಿ ಹಾಕಿ, 1.4 ಕೋಟಿ ನಗದು, ಅಂದಾಜು 20 ಕೋಟಿ ಮೌಲ್ಯದ 20 ಕೆಜಿ ಚಿನ್ನಾಭರಣ ದರೋಡೆ ಪ್ರಕರಣದಲ್ಲಿ ಮಾರಕಾಸ್ತ್ರ ಪೂರೈಸಿದ ಆರೋಪದಡಿ ಬಿಹಾರ ರಾಜ್ಯದ ಸಮಸ್ತಿಪುರದ ರಾಕೇಶಕುಮಾರ ಶಿವಾಜಿ ಸಹಾನಿ (22), ರಾಜುಕುಮಾರ ರಾಮಲಾಲ್ ಪಾಸ್ವಾನ (21), ಬಿಹಾರ ರಾಜ್ಯದ ಸಮಸ್ತಿಪುರ ಜಿಲ್ಲೆಯ ರೋಸಾರ ತಾಲೂಕಿನ ಪುಲ್ಹಾರಾ ಗ್ರಾಮದ ರಕ್ಷಕಕುಮಾರ ಮದನ ಮಾತೊ (21) ಹಾಗೂ ತನಿಖೆ ದೃಷ್ಟಿಯಿಂದ ಇನ್ನೊಬ್ಬನ ಹೆಸರು ಬಹಿರಂಗ ಪಡಿಸದ ಯುವಕ ಸೇರಿ 4 ಜನ ಬಂಧಿತ ಆರೋಪಿಗಳಾಗಿದ್ದು, ಇನ್ನಿಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಡಿಜಿಪಿ ಆರ್. ಹಿತೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾರಾಷ್ಟ್ರ ಮೂಲದ ಒಬ್ಬ ಆರೋಪಿ ಈ ಬ್ಯಾಂಕ್ ದರೋಡೆ ಪ್ರಕರಣದ ಸಂಚಿನಲ್ಲಿ ಪ್ರಮುಖ ಪಾತ್ರದಾರನಾಗಿದ್ದು, ಬ್ಯಾಂಕ್ ದರೋಡೆ ಮಾಡಲು ಸಂಚುಮಾಡಿ, ಹಲವು ಬಾರಿ ಬ್ಯಾಂಕಿಗೆ ಬಂದು ಬ್ಯಾಂಕಿನ ಒಳ- ಹೊರಗೆ ರೇಖಿ ಮಾಡಿಕೊಂಡು ಹೋಗಿದ್ದಾನೆ. ಅಲ್ಲದೇ ಬ್ಯಾಂಕ್ ದರೋಡೆ ಮಾಡಲು ಮಹಾರಾಷ್ಟ್ರದ ಮಂಗಳವೇಡಾದಲ್ಲಿ ಒಂದು ಕಾರನ್ನು ಕಳವು ಮಾಡಿ, ಅದನ್ನು ಕೃತ್ಯಕ್ಕೆ ಬಳಸಿರುವ ಬಗ್ಗೆ ತನಿಖಾ ತಂಡವು ಪತ್ತೆ ಮಾಡಿದೆ ಎಂದರು.

ಈತನನ್ನು ಅ.7, 2025 ರಂದು ಬಂಧಿಸಲಾಗಿದ್ದು, ಈತನಿಂದ 55 ಗ್ರಾಂ ಚಿನ್ನದ ಬಳೆಗಳು ಹಾಗೂ ಕೃತ್ಯಕ್ಕೆ ಬಳಿಸಿದ 1 ಬೈಕ್ ಜಪ್ತಿ ಮಾಡಲಾಗಿದೆ. ಅಲ್ಲದೆ ಇನ್ನುಳಿದ 3 ಜನ ಆರೋಪಿಗಳಿಂದ ಒಟ್ಟು 9.1 ಕೆಜಿ ಬಂಗಾರ ಹಾಗೂ 86,31,220 ರೂ. ನಗದು ಜಪ್ತಿ ಮಾಡಲಾಗಿದೆ ಎಂದರು.

ಉತ್ತರ ವಲಯ ಐಜಿಪಿ ಚೇತನಸಿಂಗ್ ರಾಠೋರ್, ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

error: Content is protected !!