ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಮಹಿಳೆಯರ ಮೇಲೆ ಕಿರುಕುಳ ಪ್ರಕರಣಗಳು ಹೆಚ್ಚುತ್ತಿದ್ದು, ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಪಕಾರ್ ಲೇಔಟ್‌ನಲ್ಲಿ ಅಂತಹುದೇ ಘಟನೆಯೊಂದು ನಡೆದಿದೆ. ನಾಯಿಯನ್ನು ಮುದ್ದು ಮಾಡುವ ನೆಪದಲ್ಲಿ ಯುವತಿಗೆ ಬ್ಯಾಡ್ ಟಚ್ ಮಾಡಿದ ಅಪರಿಚಿತ ಯುವಕನ ವರ್ತನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ 7ರ ರಾತ್ರಿ ಸುಮಾರು 10:30ಕ್ಕೆ ಯುವತಿ ತನ್ನ ನಾಯಿಯನ್ನು ವಾಕಿಂಗ್ ಮಾಡಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅವಳ ಬಳಿ ಬಂದ ಅಪರಿಚಿತ ಯುವಕ, “ನಿಮ್ಮ ನಾಯಿ ತುಂಬಾ ಕ್ಯೂಟ್ ಇದೆ, ಒಂದು ಸಾರಿ ಮುದ್ದು ಮಾಡಬಹುದಾ?” ಎಂದು ಕೇಳಿದ್ದ. ಯುವಕನ ಮಾತು ನಿರಾಯಾಸವಾಗಿ ಕಂಡಿದ್ದರಿಂದ ಯುವತಿ ಒಪ್ಪಿಗೆ ನೀಡಿದಳು. ಆದರೆ ನಾಯಿ ಮುದ್ದು ಮಾಡುವಷ್ಟರಲ್ಲಿ, ಆ ಯುವಕ ಕ್ಷಣಾರ್ಧದಲ್ಲಿ ಯುವತಿಗೆ ಬ್ಯಾಡ್ ಟಚ್ ಮಾಡಿ ಸ್ಥಳದಿಂದ ಓಡಿಹೋಗಿದ್ದಾನೆ.
ಆಘಾತಗೊಂಡ ಯುವತಿ ನಂತರ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಗಳು ಮತ್ತು ಸ್ಥಳೀಯ ಮಾಹಿತಿ ಆಧರಿಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.

