ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್ ಕೈಗಾರಿಕಾ ಪ್ರದೇಶದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಮನೆಯ ಮೇಲೆ ಆಟವಾಡುತ್ತಿದ್ದ ಆರು ವರ್ಷದ ಪುಟ್ಟ ಬಾಲಕಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಆಕೆಯನ್ನು ಕಟ್ಟಡದಿಂದ ಕೆಳಕ್ಕೆ ಎಸೆದು ಹತ್ಯೆ ಮಾಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ಫಿರೋಜಾಬಾದ್ ಜಿಲ್ಲೆಯ ಕಾರ್ಮಿಕನ ಮಗಳಾದ ಈ ಬಾಲಕಿ, ಶುಕ್ರವಾರ ಸಂಜೆ ತನ್ನ ಮನೆಯ ಮೇಲ್ಛಾವಣಿಯಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಪಕ್ಕದ ಮನೆಯಲ್ಲಿ ಬಾಡಿಗೆಗೆ ಇದ್ದ ರಾಜೂ ಮತ್ತು ವೀರು ಕಶ್ಯಪ್ ಎಂಬ ಇಬ್ಬರು ಯುವಕರು ಮದ್ಯದ ಅಮಲಿನಲ್ಲಿ ಬಾಲಕಿಯನ್ನು ಅಪಹರಿಸಿ ಅಮಾನವೀಯವಾಗಿ ದೌರ್ಜನ್ಯ ಎಸಗಿದ್ದಾರೆ.
ಬಾಲಕಿ ಕಿರುಚಾಡಲು ಶುರುಮಾಡಿದಾಗ ಗಾಬರಿಗೊಂಡ ಆರೋಪಿಗಳು, ತಮ್ಮ ಕೃತ್ಯ ಬಯಲಾಗಬಾರದೆಂದು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಇದೊಂದು ಅಪಘಾತ ಎಂಬಂತೆ ಬಿಂಬಿಸಲು ಮೃತದೇಹವನ್ನು ಮೂರನೇ ಮಹಡಿಯ ಛಾವಣಿಯಿಂದ ಕೆಳಕ್ಕೆ ಎಸೆದಿದ್ದಾರೆ.
ಆರಂಭದಲ್ಲಿ ಬಾಲಕಿ ಆಟವಾಡುವಾಗ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಭಾವಿಸಲಾಗಿತ್ತು. ಆದರೆ ಪೋಷಕರ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯಾಗಿರುವುದು ಸಾಬೀತಾಗಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾದರು. ಈ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ.


