ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದ ಬಿಸಿ ಹೆಚ್ಚಾಗಿರುವ ನಡುವೆಯೇ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದು, ಆಡಳಿತ ಹಾಗೂ ಪ್ರತಿಪಕ್ಷಗಳ ತಂತ್ರಪ್ರತಿತಂತ್ರಗಳು ಕುತೂಹಲ ಮೂಡಿಸಿವೆ.
ಡಿಸೆಂಬರ್ 19ರವರೆಗೆ ನಡೆಯಲಿರುವ 10 ದಿನಗಳ ಅಧಿವೇಶನದಲ್ಲಿ ಸರ್ಕಾರಕ್ಕೆ ಸವಾಲು ಎಸೆಯಲು ಬಿಜೆಪಿ–ಜೆಡಿಎಸ್ ಮೈತ್ರಿ ಮುಂದಾಗಿದ್ದು, ಆಡಳಿತ ಪಕ್ಷವೂ ಪ್ರತಿದಾಳಿಗೆ ಸಜ್ಜಾಗಿದೆ. ಅಧಿವೇಶನದ ಮೊದಲ ದಿನದ ಕಲಾಪ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಲಿದೆ. ಬಳಿಕ ಸ್ಪೀಕರ್ ಕಲಾಪ ಮುಂದೂಡುವ ಸಾಧ್ಯತೆ ಇದೆ.
ಈ ಬಾರಿ 21ಕ್ಕೂ ಹೆಚ್ಚು ವಿಧೇಯಕಗಳನ್ನು ಮಂಡಿಸುವ ನಿರೀಕ್ಷೆಯಿದ್ದು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯ ಕೇಂದ್ರಬಿಂದುವಾಗುವ ಸಾಧ್ಯತೆ ಇದೆ. ಕಳೆದ ಅಧಿವೇಶನದಲ್ಲಿ ನೀಡಿದ ಭರವಸೆಗಳ ಅನುಷ್ಠಾನ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸಲು ತಯಾರಾಗಿವೆ.
ಆಡಳಿತ ಪಕ್ಷದ ಒಳಗಿನ ಬಣಗಾರಿಕೆ, ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಹಾಗೂ ದಿಲ್ಲಿ ರಾಜಕಾರಣವೂ ಅಧಿವೇಶನದ ಮೇಲೆ ಪರಿಣಾಮ ಬೀರುವ ಸಂಭವವಿದೆ. ಈ ಹಿನ್ನೆಲೆ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ರೂಪಿಸಿಕೊಂಡಿವೆ.

