ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್ ರಾಜಕೀಯದಲ್ಲಿ ಮತ್ತೊಮ್ಮೆ ಅಸ್ಥಿರತೆ ಎದುರಾಗಿದೆ. ಪ್ರಧಾನಿ ಶಿಗೆರು ಇಶಿಬಾ ತಮ್ಮ ಹುದ್ದೆಗೆ ಶೀಘ್ರದಲ್ಲೇ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (LDP)ಯ ಒಳಗಿನ ವಿಭಜನೆ ಹಾಗೂ ಜುಲೈ ಸಂಸತ್ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆ ಇಶಿಬಾ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಜಪಾನ್‌ನಲ್ಲಿ ಯಾವುದೇ ಪ್ರಧಾನಿ ಸತತ ಮೂರು ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯದೆ ರಾಜಕೀಯ ಅಸ್ಥಿರತೆ ಮುಂದುವರಿದಿದೆ.
ಜುಲೈನಲ್ಲಿ ನಡೆದ ಮೇಲ್ಮನೆ ಚುನಾವಣೆಯಲ್ಲಿ ಎಲ್ಡಿಪಿ ನೇತೃತ್ವದ ಒಕ್ಕೂಟ ಬಹುಮತ ಕಳೆದುಕೊಂಡಿತ್ತು. ಇದರ ಪರಿಣಾಮವಾಗಿ ಪಕ್ಷದೊಳಗಿನಿಂದಲೇ ಇಶಿಬಾ ವಿರುದ್ಧ ತೀವ್ರ ಟೀಕೆಗಳು ಹೆಚ್ಚಾದವು. ಪಕ್ಷದ ಬಲಪಂಥೀಯ ಬಣವು ರಾಜಕೀಯ ಜವಾಬ್ದಾರಿ ಹೊತ್ತುಕೊಳ್ಳುವಂತೆ ಒತ್ತಡ ತರುವ ನಡುವೆ, ಅವರು ಸ್ವತಃ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಜಪಾನ್‌ನ ಟಿವಿ ವರದಿಗಳ ಪ್ರಕಾರ, ಈ ನಡೆ ಪಕ್ಷದೊಳಗಿನ ಅಸಮಾಧಾನವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
ಇಶಿಬಾ ಅವರು 1986 ರಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯರಾಗಿದ್ದು, ಹಲವು ಪ್ರಮುಖ ಸಚಿವ ಸ್ಥಾನಗಳನ್ನು ಅಲಂಕರಿಸಿದ್ದಾರೆ. 2007–08ರಲ್ಲಿ ರಕ್ಷಣಾ ಸಚಿವ, 2008–09ರಲ್ಲಿ ಕೃಷಿ ಮತ್ತು ಮೀನುಗಾರಿಕೆ ಸಚಿವ ಹಾಗೂ 2012–14ರಲ್ಲಿ ಎಲ್ಡಿಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರ ರಾಜಕೀಯ ಪಯಣ 29ನೇ ವಯಸ್ಸಿನಲ್ಲಿ ಆರಂಭವಾಗಿದ್ದು, 2024ರಲ್ಲಿ ಪ್ರಧಾನಿ ಹುದ್ದೆ ವಹಿಸಿಕೊಂಡಿದ್ದರು.
ಇಶಿಬಾ ಅವರ ರಾಜೀನಾಮೆ ನಿರ್ಧಾರವನ್ನು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ಸೋಮವಾರ ಪಕ್ಷದ ನಾಯಕತ್ವ ಬದಲಾವಣೆಯ ಮೇಲೆ ಮತದಾನ ನಡೆಯಬೇಕಿತ್ತು. ಅದು ನೇರವಾಗಿ ಇಶಿಬಾ ವಿರುದ್ಧದ ಅವಿಶ್ವಾಸ ನಿರ್ಣಯವಾಗುವ ಸಾಧ್ಯತೆ ಇತ್ತು. ಈ ಸ್ಥಿತಿಯನ್ನು ತಪ್ಪಿಸಲು, ಅವರು ಸ್ವತಃ ಹುದ್ದೆ ತೊರೆಯಲು ಮುಂದಾಗಿದ್ದಾರೆ.