Saturday, August 30, 2025

ಕಾಂಗ್ರೆಸ್ ನಾಯಕರಿಂದ ದೇಶದಲ್ಲಿ ದ್ವೇಷದ ರಾಜಕೀಯ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದಲ್ಲಿ ರಾಹುಲ್ ಗಾಂಧಿಯ ಮತ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ವಿರುದ್ಧ ಬಳಸಿದ ನಿಂದನಾತ್ಮಕ ಭಾಷೆಯ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾಟೀಕಿಸಿದ್ದು, ಕಾಂಗ್ರೆಸ್ ನಾಯಕರು ದೇಶದಲ್ಲಿ ‘ದ್ವೇಷದ ರಾಜಕೀಯ’ವನ್ನು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿಯ ಮತದಾರರ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ದರ್ಭಾಂಗದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪ್ರಧಾನಿ ಮೋದಿಯನ್ನು ನಿಂದಿಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಬಿಹಾರದಲ್ಲಿ ಭಾರಿ ವಿವಾದ ಭುಗಿಲೆದ್ದಿತು. ಈ ಕೃತ್ಯ ಮಾಡಿದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಈ ಘಟನೆಯ ಬಗ್ಗೆ ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ದೇಶದಲ್ಲಿ ದ್ವೇಷದ ರಾಜಕೀಯವನ್ನು ಪ್ರಾರಂಭಿಸಿದ್ದಾರೆ. ಅದು ದೇಶವನ್ನು ಮೇಲಕ್ಕೆ ಕೊಂಡೊಯ್ಯುವುದಿಲ್ಲ ಎಂದು ಟೀಕಿಸಿದ್ದಾರೆ.

ಬಿಹಾರದ ಯಾತ್ರೆಯ ಸಮಯದಲ್ಲಿ ಪ್ರಧಾನಿ ಮೋದಿಯವರ ತಾಯಿಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುವ ಮೂಲಕ ಕಾಂಗ್ರೆಸ್ ನಾಯಕರು ಅತ್ಯಂತ ಹೀನ ಕೃತ್ಯವನ್ನು ಎಸಗಿದ್ದಾರೆ. ನಾನು ಅದನ್ನು ಖಂಡಿಸುತ್ತೇನೆ. ರಾಹುಲ್ ಗಾಂಧಿ ಪ್ರಾರಂಭಿಸಿದ ದ್ವೇಷದ ರಾಜಕೀಯವು ನಮ್ಮ ಸಾರ್ವಜನಿಕ ಜೀವನವನ್ನು ಹಾಳು ಮಾಡುತ್ತದೆ ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಕಾಂಗ್ರೆಸ್​​ನವರು ಈ ರೀತಿ ಮಾಡುತ್ತಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಣಿಶಂಕರ್ ಅಯ್ಯರ್, ದಿಗ್ವಿಜಯ ಸಿಂಗ್, ಜೈರಾಮ್ ರಮೇಶ್, ರೇಣುಕಾ ಚೌಧರಿ ಹೀಗೆ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರೂ ಪ್ರಧಾನಿ ಮೋದಿಯವರಿಗೆ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ. ಕಾಂಗ್ರೆಸ್ ನಾಯಕರು ಇಂತಹ ಭಾಷೆಯನ್ನು ಬಳಸಿ ಚುನಾವಣೆಗಳನ್ನು ಗೆಲ್ಲಬಹುದು ಎಂದು ಯೋಚಿಸಿದ್ದಾರಾ? ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.

ನೀವು ಪ್ರಧಾನಿ ಮೋದಿ ಅವರನ್ನು ಹೆಚ್ಚು ನಿಂದಿಸಿದಷ್ಟೂ ಕಮಲವು ಇನ್ನಷ್ಟು ಅರಳುತ್ತದೆ ಎಂದು ನಾನು ಕಾಂಗ್ರೆಸ್ ನಾಯಕರಿಗೆ ಹೇಳಲು ಬಯಸುತ್ತೇನೆ. ನೀವು ಪ್ರತಿ ಚುನಾವಣೆಯಲ್ಲಿಯೂ ಅದನ್ನು ಪ್ರಯತ್ನಿಸಿದ್ದೀರಿ, ಆದರೆ ನೀವು ಇನ್ನೂ ಕಲಿಯಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ