ಹೊಸದಿಗಂತ ವರದಿ ಬೆಳಗಾವಿ:
ರಾಜಕಾರಣ ನಿಂತ ನೀರಲ್ಲ, ಅದು ನಿರಂತರ ಚಲನಶೀಲತೆ ಹೊಂದಿದೆ ಎನ್ನುವ ಮೂಲಕ ಕಾಂಗ್ರೆಸ್ ಹಿರಿಯ ಶಾಸಕ ಕೆ.ಎನ್.ರಾಜಣ್ಣ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಸೂಕ್ಷ್ಮವಾಗಿ ಸುಳಿವು ನೀಡಿದ್ದಾರೆ.
ಸುವರ್ಣಸೌಧದಲ್ಲಿ ಸೋಮವಾರ ಸುದ್ದಿಗಾರರೊಡನೆ ಮಾತನಾಡಿ, ಎಲ್ಲ ಪಕ್ಷಗಳಲ್ಲಿ ಬದಲಾವಣೆ ನಡೆಯುತ್ತಲೇ ಇರುತ್ತವೆ. ಅದರಂತೆ ನಮ್ಮಲ್ಲೂ ಸಹ ಮುಖ್ಯಮಂತ್ರಿ ಆಗಬೇಕು, ಮಂತ್ರಿಗಳಾಗಬೇಕು ಎಂಬ ಆಕಾಂಕ್ಷೆ ಬಹಳ ಜನರದ್ದಿದ್ದು ಇದಕ್ಕೆಲ್ಲ ಹೈಕಮಾಂಡ್ ಶೀಘ್ರ ತೆರೆ ಎಳೆಯಬೇಕು ಎಂದು ಪುನರುಚ್ಛರಿಸಿದರು.
ಸಿದ್ದರಾಮಯ್ಯರನ್ನು ಬದಲಾಯಿಸಿದರೆ, ಡಿಕೆ ಶಿವಕುಮಾರ ಅವರು ಮುಖ್ಯಮಂತ್ರಿಯಾಗುವುದು ನಿಶ್ಚಿತನಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ಎಷ್ಟು ಜನ ಇದ್ದಾರೀ ನಮ್ಮಲ್ಲಿ. ಪರಮೇಶ್ವರ 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಪಕ್ಷ ಸಹ ಅಧಿಕಾರಕ್ಕೆ ತಂದಿದ್ದಾರೆ, ಕೇವಲ ಜಾತಿ ಆಧಾರದ ಮೇಲಲ್ಲ, ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೆ ಅವಕಾಶ ಕೊಡಬೇಕು ಎಂದು ರಾಜಣ್ಣ ದಲಿತ ಸಿಎಂ ಬಗ್ಗೆ ಮತ್ತೊಮ್ಮೆ ಟ್ರಂಪ್ ಕಾರ್ಡ್ ಎಸೆದರು.

