ಹೊಸದಿಗಂತ ಡಿಜಿಟಲ್ ಡೆಸ್ಕ್:
ದೂರದರ್ಶನದ ಜನಪ್ರಿಯ ನಿರೂಪಕಿ, ಮನೆಮಾತಾಗಿದ್ದ ಹಿರಿಯ ಸುದ್ದಿ ವಾಚಕಿ ಸರಳಾ ಮಹೇಶ್ವರಿ (71) ಗುರುವಾರ ದೆಹಲಿಯಲ್ಲಿ ನಿಧನರಾದರು.
1980 ಮತ್ತು 90ರ ದಶಕದಲ್ಲಿ ದೂರದರ್ಶನ ನ್ಯೂಸ್‌ನ ಅತ್ಯಂತ ಪರಿಚಿತ ಮುಖಗಳಲ್ಲಿ ಒಬ್ಬರಾಗಿದ್ದ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
1980 ಮತ್ತು 90ರ ದಶಕದಲ್ಲಿಇಡೀ ದೇಶವು ಸುದ್ದಿಗಳಿಗಾಗಿ ದೂರದರ್ಶನವನ್ನೇ ಅವಲಂಬಿಸಿತ್ತು. ಅಂತಹ ಸಮಯದಲ್ಲಿ ಸರಳಾ ಮಹೇಶ್ವರಿ ತಮ್ಮ ವಿಶಿಷ್ಟ ಶೈಲಿಯ ಮೂಲಕ ಜನರ ಮನಗೆದ್ದಿದ್ದರು. ಅವರ ಸರಳ ವ್ಯಕ್ತಿತ್ವ, ಸ್ಪಷ್ಟ ಉಚ್ಚಾರಣೆ ಮತ್ತು ಸುದ್ದಿಯನ್ನು ಪ್ರಸ್ತುತಪಡಿಸುವಲ್ಲಿ ಅವರು ತೋರುತ್ತಿದ್ದ ಸಂಯಮ ಇಂದಿಗೂ ಅನೇಕರ ನೆನಪಿನಲ್ಲಿ ಹಚ್ಚ ಹಸಿರಾಗಿದೆ.
ದೂರದರ್ಶನ ನ್ಯೂಸ್‌ನ ಅಧಿಕೃತ ‘X’ (ಟ್ವಿಟರ್) ಖಾತೆಯು ಸರಳಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ‘ಸರಳಾ ಮಹೇಶ್ವರಿ ಅವರ ಸರಳತೆ, ಸಂಯಮ ಮತ್ತು ಪ್ರಭಾವಶಾಲಿ ವ್ಯಕ್ತಿತ್ವವು ವೀಕ್ಷಕರ ಹೃದಯದಲ್ಲಿ ಆಳವಾದ ನಂಬಿಕೆಯನ್ನು ಮೂಡಿಸಿತ್ತು. ದೂರದರ್ಶನ ಕುಟುಂಬವು ಅವರಿಗೆ ಹೃತ್ಪೂರ್ವಕ ಗೌರವವನ್ನು ಸಲ್ಲಿಸುತ್ತದೆ. ಅವರು ಭಾರತೀಯ ಸುದ್ದಿ ಲೋಕದಲ್ಲಿ ತಮ್ಮ ಮೃದು ಧ್ವನಿ ಮತ್ತು ಘನತೆಯ ಪ್ರಸ್ತುತಿಯ ಮೂಲಕ ವಿಶೇಷ ಸ್ಥಾನ ಗಳಿಸಿದ್ದರು’ ಎಂದು ಪೋಸ್ಟ್ ಮಾಡಿದೆ.



