ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಅಧಿಕಾರ ಹಂಚಿಕೆ ವಿಚಾರದ ಹಣಾಹಣಿಯು ಈಗ ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರ್ನಾಟಕದ ರಾಜಕೀಯ ಮೇಲಾಟದ ಚರ್ಚೆಗಳು ರಾಷ್ಟ್ರ ರಾಜಧಾನಿ ದೆಹಲಿಯ ರಾಜಕೀಯ ವಲಯದಲ್ಲಿ ತೀವ್ರಗೊಂಡಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ. ಇಬ್ಬರೂ ನಾಯಕರು ಸಾಮಾಜಿಕ ಜಾಲತಾಣವಾದ ‘ಎಕ್ಸ್’ ವೇದಿಕೆಯ ಮೂಲಕ ಪರೋಕ್ಷವಾಗಿ ಸಂದೇಶಗಳನ್ನು ರವಾನಿಸುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಅಧಿಕಾರಾವಧಿಯ ಗಡುವು: ಡಿಕೆಶಿ ಆಗ್ರಹ, ಸಿಎಂ ಸಮಯಾವಕಾಶ
ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿದ್ದಾರೆ. ಹೀಗಾಗಿ, ಚುನಾವಣೆಯ ಪೂರ್ವದಲ್ಲಿ ಮಾಡಿಕೊಂಡಿದ್ದ ಅಧಿಕಾರ ಹಂಚಿಕೆಯ ಒಪ್ಪಂದದಂತೆ ಉಳಿದ ಎರಡೂವರೆ ವರ್ಷಗಳ ಅವಧಿಯನ್ನು ತಮಗೆ ಬಿಟ್ಟುಕೊಡಬೇಕು ಎಂಬುದು ಡಿಕೆಶಿ ಅವರ ಪ್ರಮುಖ ಬೇಡಿಕೆಯಾಗಿದೆ. ಹೈಕಮಾಂಡ್ ಮುಂದೆ ಈ ಇಬ್ಬರು ಪ್ರಬಲ ನಾಯಕರು ತಮ್ಮ ತಮ್ಮ ನಿಲುವುಗಳು ಮತ್ತು ವಾದಗಳನ್ನು ಮಂಡಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಸಿದ್ದರಾಮಯ್ಯರ ವಾದ: ಬಜೆಟ್‌ವರೆಗೆ ಯಾವುದೇ ಚರ್ಚೆ ಬೇಡ. ಆ ಸಂದರ್ಭದ ರಾಜಕೀಯ ಪರಿಸ್ಥಿತಿ ಹಾಗೂ ಇಂದಿನ ಪರಿಸ್ಥಿತಿ ಭಿನ್ನವಾಗಿದೆ. ಶಾಸಕರ ಅಭಿಪ್ರಾಯಗಳನ್ನು ಪಡೆದೇ ನಿರ್ಧಾರ ತೆಗೆದುಕೊಳ್ಳಿ. ಯಾವುದೇ ಅವಸರದ ನಿರ್ಧಾರ ಬೇಡ. ಸದ್ಯದ ಯಥಾಸ್ಥಿತಿಯನ್ನು ಮುಂದುವರಿಸಿ, ಎರಡ್ಮೂರು ತಿಂಗಳು ಸಮಯ ತೆಗೆದುಕೊಂಡು ನಿರ್ಧಾರ ಕೈಗೊಳ್ಳಿ.
ಡಿಕೆ ಶಿವಕುಮಾರ್‌ರ ಬೇಡಿಕೆ: ಕೊಟ್ಟ ಮಾತು ಉಳಿಸಿಕೊಳ್ಳಲೇಬೇಕು. ಹೈಕಮಾಂಡ್ ಸಮ್ಮುಖದಲ್ಲಿ ಆಗಿರುವ ಒಪ್ಪಂದವನ್ನು ಸ್ಪಷ್ಟವಾಗಿ ಜಾರಿಗೆ ತರಬೇಕು. ಬಜೆಟ್ ತನಕ ಕಾಯಲು ಸಾಧ್ಯವಿಲ್ಲ. ಬೇಕಿದ್ದರೆ ಗರಿಷ್ಠ ಜನವರಿ 14ರವರೆಗೆ ಮಾತ್ರ ಸಮಯ ಕೊಡಿ. ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಶಾಸಕರ ಅಭಿಪ್ರಾಯ ಪಡೆಯಲಿ ಎಂದೂ ಅವರು ಆಗ್ರಹಿಸಿದ್ದಾರೆ.

