Wednesday, November 26, 2025

ಮಾನವೀಯತೆಯ ‘ಪಥ’ದಲ್ಲಿ ‘ಪವರ್ ಸ್ಟಾರ್’ ಫ್ಯಾನ್ಸ್: ಉಪಹಾರ ವಿತರಣೆ, ನೇತ್ರದಾನಕ್ಕೆ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸುವ ಮತ್ತು ಅವರ ಆದರ್ಶಗಳನ್ನು ಪಾಲಿಸುವ ನಿಟ್ಟಿನಲ್ಲಿ, ಚಿತ್ರದುರ್ಗ ತಾಲ್ಲೂಕು ಆರ್ಯ ಈಡಿಗ ಸಂಘ ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಬುಧವಾರ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದ ನಂತರ, ಅವರ ಸ್ಮರಣಾರ್ಥವಾಗಿ ಸಂಘವು ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಿತು. ಕಾರ್ಯಕ್ರಮದ ಮುಖ್ಯ ಭಾಗವಾಗಿ ಆಸ್ಪತ್ರೆಯ ಸಿಬ್ಬಂದಿ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರೊಂದಿಗೆ ಬಂದಿರುವ ಬಂಧುಗಳಿಗೆ ಉಚಿತವಾಗಿ ಉಪಹಾರವನ್ನು ವಿತರಿಸಲಾಯಿತು. ಸಾವಿರಾರು ಜನರಿಗೆ ಉಪಹಾರ ವಿತರಿಸುವ ಮೂಲಕ ಸಂಘದ ಸದಸ್ಯರು ಆಸ್ಪತ್ರೆಯ ಪರಿಸರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದರು.

‘ಅಪ್ಪು’ ಜೀವನವೇ ಪ್ರೇರಣೆ
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಸಿ.ಎಸ್.ರವೀಂದ್ರ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಉಪವಿಭಾಗದ ಡಿವೈಎಸ್‌ಪಿ ಶ್ರೀನಿವಾಸ್ ಅವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿಗಳು, ನಟ ಪುನೀತ್ ರಾಜ್‌ಕುಮಾರ್ ಅವರ ಮಾನವೀಯತೆ, ಸಮಾಜಸೇವೆ ಮತ್ತು ಯುವಕರಿಗೆ ಅವರು ನೀಡಿದ ಪ್ರೇರಣೆಯನ್ನು ಕೊಂಡಾಡಿದರು. ಸಮಾಜಕ್ಕಾಗಿ ಕೆಲಸ ಮಾಡುವ ಮನಸ್ಸು ಇರಬೇಕು, ಅದಕ್ಕೆ ಪುನೀತ್ ಅವರ ಜೀವನವೇ ಮಾದರಿ ಎಂದು ಅವರು ಬಣ್ಣಿಸಿದರು.

ನೇತ್ರದಾನಕ್ಕೆ ಕರೆ
ಅಲ್ಲದೆ, ಇಂದಿನ ದಿನಗಳಲ್ಲಿ ಅಕಾಲಿಕ ಮರಣ ಹೊಂದುವವರ ಸಂಖ್ಯೆ ಹೆಚ್ಚುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದ ಅತಿಥಿಗಳು, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ, ಆರೋಗ್ಯವಂತರಾಗಿ ಬಾಳಬೇಕು ಎಂದು ಕರೆ ನೀಡಿದರು.

“ಮರಣದ ನಂತರವೂ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅನೇಕರಿಗೆ ದಾರಿ ದೀಪವಾಗಿದ್ದಾರೆ. ಅದೇ ರೀತಿ, ಪ್ರತಿಯೊಬ್ಬರೂ ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಬೇಕು” ಎಂದು ಸಾರ್ವಜನಿಕರನ್ನು ಒತ್ತಾಯಿಸಿದರು.

ಸಂಘದ ಮುಖಂಡರುಗಳಾದ ಎನ್.ಈ.ಲಕ್ಷ್ಮಿಕಾಂತ್, ಲಕ್ಷ್ಮಿನಾರಾಯಣ್, ಶ್ರೀನಿವಾಸ್, ಶಿವಕುಮಾರ್, ಉದಯ್, ಗುರು, ಗುರು ಕೊಳಲು, ಮಂಜುನಾಥ್ ಜೆ, ಯೋಗೇಶ್, ಚಂದ್ರು, ಮೃತ್ಯುಂಜಯ, ನವೀನ್, ಸಂತೋಷ್, ಸುರೇಶ್, ಅಭಿ, ನಿಂಗೇಶ್ ಎಲ್. ಶ್ರೀನಿವಾಸ್, ಪ್ರಸನ್ನ ಬಾಬು, ಡಿ. ಮಂಜುನಾಥ್ ಹಾಗೂ ಅಭಿಮಾನಿ ಬಳಗದ ಸುರೇಂದ್ರ, ರಾಘವೇಂದ್ರ ಎಸ್. ಸೇರಿದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

error: Content is protected !!