Sunday, January 11, 2026

ಅಧಿಕಾರ ಜಟಾಪಟಿ: ಆಡಳಿತ ವೈಫಲ್ಯಕ್ಕೆ ಮಾಧ್ಯಮ, ವಿಪಕ್ಷಗಳ ಮೇಲೆ ಗೂಬೆ: B.Y.ರಾಘವೇಂದ್ರ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಸದ್ಯಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಈ ಬೆಳವಣಿಗೆಯನ್ನು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು “ಹೃದಯಾಘಾತಕ್ಕೆ ಸ್ಟಂಟ್ ಹಾಕಿ ಜೀವ ಉಳಿಸಿದ್ದಾರೆ” ಎಂದು ಮಾರ್ಮಿಕವಾಗಿ ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಇತ್ತೀಚಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಧಿಕಾರ ಹಂಚಿಕೆ ವಿಚಾರದಲ್ಲಿನ ಈ ಜಗಳಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದ್ದರೂ, ಮುಂಬರುವ ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಈ ‘ಕಿತ್ತಾಟ’ ಪುನಃ ಮುಂದುವರಿಯಲಿದೆ ಎಂದು ಅವರು ಭವಿಷ್ಯ ನುಡಿದರು.

ಮಾಧ್ಯಮ ಹಾಗೂ ವಿಪಕ್ಷಗಳ ಮೇಲೆ ಗೂಬೆ:

ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಸಿಎಂ ಕುರ್ಚಿ ನಾಟಕವೇ ನಡೆದಿದೆ. ಆದರೆ, ಇಬ್ಬರೂ ನಾಯಕರು ಈಗ ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿ, ಈ ಜಗಳಕ್ಕೆ ಮಾಧ್ಯಮಗಳನ್ನು ‘ಮೊದಲನೇ ಆರೋಪಿ’ ಹಾಗೂ ವಿರೋಧ ಪಕ್ಷವನ್ನು ‘ಅಪರಾಧಿ’ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. “ಸರ್ಕಾರ ಮಾಡಿರುವ ತಪ್ಪನ್ನು ಈಗ ಮಾಧ್ಯಮ ಮತ್ತು ವಿಪಕ್ಷಗಳ ಮೇಲೆ ಹಾಕಿ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ” ಎಂದು ರಾಘವೇಂದ್ರ ಅವರು ಆಡಳಿತ ಪಕ್ಷದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.

ಈ ‘ಕುರ್ಚಿ ಕದನ’ದ ಪರಿಣಾಮವಾಗಿ ರಾಜ್ಯದಲ್ಲಿ ಆಡಳಿತ ಕುಂಠಿತಗೊಂಡಿದೆ. ಸರ್ಕಾರದಲ್ಲಿರುವ ಅಧಿಕಾರಿಗಳು ಅಭದ್ರತೆ ಮತ್ತು ಗೊಂದಲದಲ್ಲಿ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ರಾಜ್ಯದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮೆಕ್ಕೆಜೋಳದ ಖರೀದಿ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದು, ರೈತರು ಕಡಿಮೆ ಬೆಲೆಗೆ ತಮ್ಮ ಬೆಳೆ ಮಾರಾಟ ಮಾಡುವಂತಾಗಿದೆ. ಈಗ ಸಿಎಂ ಮತ್ತು ಡಿಸಿಎಂ ಅವರು ಕೇವಲ ‘ತೇಪೆ ಹಚ್ಚುವ ಕೆಲಸ’ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!