Monday, September 1, 2025

ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ: 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಭೂಕಂಪವು ನೂರಾರು ಜನರ ಪ್ರಾಣ ಕಸಿದುಕೊಂಡಿದೆ. ಸ್ಥಳೀಯ ಕಾಲಮಾನ ರಾತ್ರಿ 11:47ಕ್ಕೆ ದಾಖಲಾಗಿದ ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.0 ಎಂದು ದಾಖಲಾಗಿದೆ. 160 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ ಈ ಭೂಕಂಪದ ಕೇಂದ್ರಬಿಂದು ಆಗ್ನೇಯ ಅಫ್ಘಾನಿಸ್ತಾನದ 34.50N ಅಕ್ಷಾಂಶ ಹಾಗೂ 70.81E ರೇಖಾಂಶದಲ್ಲಿ ಇರುವುದು ದೃಢಪಟ್ಟಿದೆ.

ಈ ಭೂಕಂಪದಲ್ಲಿ ಕನಿಷ್ಠ 622 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕುನಾರ್ ಪ್ರಾಂತ್ಯದ ಮೂರು ಹಳ್ಳಿಗಳು ಸಂಪೂರ್ಣವಾಗಿ ನೆಲಸಮಗೊಂಡಿದ್ದು, ಹಲವಾರು ಹಳ್ಳಿಗಳು ತೀವ್ರ ಹಾನಿಗೊಳಗಾಗಿವೆ. ಒಂದೇ ಹಳ್ಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವುದಾಗಿ ಅಫ್ಘಾನ್ ಆರೋಗ್ಯ ಸಚಿವಾಲಯದ ವಕ್ತಾರ ಶರಫತ್ ಜಮಾನ್ ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.

ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸ್ಥಳೀಯರು ಜೀವಂತವಾಗಿ ಸಿಲುಕಿರುವವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಅಫ್ಘಾನಿಸ್ತಾನದ ವಿದೇಶಾಂಗ ಕಚೇರಿಯ ಪ್ರಕಾರ, ಈವರೆಗೆ ಯಾವುದೇ ದೇಶಗಳು ರಕ್ಷಣಾ ಅಥವಾ ಪರಿಹಾರ ಕಾರ್ಯಗಳಿಗೆ ನೆರವು ನೀಡಲು ಮುಂದಾಗಿಲ್ಲ. ಇದರಿಂದಾಗಿ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಭೂಕಂಪದ ಪರಿಣಾಮ ಪಾಕಿಸ್ತಾನ ಹಾಗೂ ಉತ್ತರ ಭಾರತದ ಕೆಲವು ಭಾಗಗಳಲ್ಲಿಯೂ ಅನುಭವವಾಗಿದೆ. ದೆಹಲಿ ಎನ್‌ಸಿಆರ್ ಸೇರಿದಂತೆ ಅನೇಕ ನಗರಗಳಲ್ಲಿ ಜನರು ಕಂಪನದ ಅನುಭವದಿಂದ ಬೆಚ್ಚಿಬಿದ್ದು ಕಟ್ಟಡಗಳಿಂದ ಹೊರಗೆ ಓಡಿದ ಘಟನೆ ವರದಿಯಾಗಿದೆ.

ಇದನ್ನೂ ಓದಿ