ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋರ್ಟ್ ತೀರ್ಪು ಎಲ್ಲರಿಗೂ ಮಾನ್ಯ. ಯಾರೇ ಆಗಿರಲಿ, ನ್ಯಾಯಾಲಯದ ತೀರ್ಮಾನಕ್ಕೆ ತಲೆಬಾಗಬೇಕಾಗುತ್ತದೆ. ಈ ತೀರ್ಪಿನ ಕುರಿತು ಹೆಚ್ಚಿನ ವಿಶ್ಲೇಷಣೆ ಅಗತ್ಯವಿಲ್ಲ, ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಜೀವಾವಧಿ ಶಿಕ್ಷೆಗೆ ಗುರಿಯಾದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದರು. “ಆರೋಪಗಳು ಹೊರಬಂದ ಕೂಡಲೇ, ಜೆಡಿಎಸ್ ಪಕ್ಷವು ಪ್ರಜ್ವಲ್ ರೇವಣ್ಣ ಅವರನ್ನು ಅಮಾನತುಗೊಳಿಸಿತು. ಅವರು ಅಪರಾಧಿ ಎಂಬ ತೀರ್ಪು ಆಗಾಗಲೇ ಬಂದಿರಲಿಲ್ಲ. ಆದರೂ ಪಕ್ಷವು ತಮ್ಮ ನಿಲುವು ಸ್ಪಷ್ಟಪಡಿಸಿ, ತಕ್ಷಣ ಕ್ರಮ ತೆಗೆದುಕೊಂಡಿತು,” ಎಂದು ನಿಖಿಲ್ ಹೇಳಿದರು.
ನಿಖಿಲ್ ಕುಮಾರಸ್ವಾಮಿ ಅವರು ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಹೇಳಿದ್ದು, “ಪಕ್ಷದ ವರಿಷ್ಠರು ಈ ಸಂಬಂಧ ತೆಗೆದುಕೊಂಡ ನಿರ್ಧಾರಗಳು ಸ್ಪಷ್ಟವಾಗಿವೆ. ಯಾವ ರಾಜಕೀಯ ಲಾಭಕ್ಕಾಗಲೀ ಈ ವಿಷಯವನ್ನು ಬಳಸಬಾರದು. ನ್ಯಾಯಾಂಗ ಕ್ರಮಗಳು ನಡೀತಿವೆ. ನಾವು ಎಲ್ಲರೂ ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಬೇಕು,” ಎಂದು ಹೇಳಿದ್ದಾರೆ.
ಇದೇ ವೇಳೆ, ಪಕ್ಷದ ಮೇಲಿನ ನಂಬಿಕೆಯನ್ನು ಕೆಡಿಸುವ ಪ್ರಯತ್ನ ರಾಜಕೀಯವಾಗಿ ನಡೆಯಬಾರದು ಎಂಬ ಸೂಚನೆಯನ್ನು ಕೂಡ ನಿಖಿಲ್ ನೀಡಿದರು. “ಪಕ್ಷದ ಸ್ಥಿತಿಗತಿಗಳು ಎಷ್ಟು ಗಂಭೀರವಾಗಿರಲಿ, ನಾವು ಸಮಾಜದ ಮುಂದೆ ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಕಾನೂನು ತನ್ನ ಹಾದಿಯಲ್ಲಿ ಮುಂದುವರಿಯಲಿ,” ಎಂದರು.