ಹೊಸದಿಗಂತ ವರದಿ ಪುತ್ತೂರು:
ಅಡಿಕೆ ಬಳಕೆ ಮತ್ತು ಅದರ ನೀತಿ ಪರಿಣಾಮಗಳ ಕುರಿತು ಇದೇ ಜ. 30 ರಂದು ನಡೆಯಲಿರುವ ವಿಶ್ವ ಆರೋಗ್ಯ ಸಂಸ್ಥೆ(WHO) ವತಿಯಿಂದ ನಡೆಯುವ “Areca Nut Challenge: Turning Policy into Impact in South-East Asia” ವಿಷಯದಲ್ಲಿ ವೆಬಿನಾರ್ ನಡೆಯುವ ಹಿನ್ನೆಲೆಯಲ್ಲಿ, ಅಡಿಕೆ ಸಂಬಂಧಿತ ಮಹತ್ವದ ವಿಚಾರಗಳ ಮೇಲೆ ಚರ್ಚಿಸಲು ವಿಜ್ಞಾನಿಗಳು, ಸಂಶೋಧಕರು, ಸಹಕಾರ ಕ್ಷೇತ್ರದ ನಾಯಕರು ಹಾಗೂ ಅಡಿಕೆ ಬೆಳೆಗಾರ ಹಿತ ಚಿಂತನೆಯ ಪ್ರಮುಖರ ಪೂರ್ವಬಾವಿ ಸಭೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕ್ಯಾಂಪ್ಕೋ ಚಾಕೋಲೇಟ್ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ವಹಿಸಿದ್ದರು.
ಸಭೆಯಲ್ಲಿ ಅಡಿಕೆಯ ಪ್ರಸ್ತುತ ವರ್ಗೀಕರಣ, ಅದರ ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಕೃಷಿ ಮಹತ್ವಗಳ ಬಗ್ಗೆ ಚರ್ಚೆ ನಡೆಯಿತು. ಅಡಿಕೆಯನ್ನು ಕ್ಯಾನ್ಸರ್‌ಕಾರ ಗುಂಪು 1 ಎಂದು ಪರಿಗಣಿಸಿರುವುದರ ಕುರಿತು ಸಭೆಯಲ್ಲಿ ಗಂಭೀರ ಆಕ್ಷೇಪ ವ್ಯಕ್ತವಾಯಿತು. ಅಡಿಕೆ ಮಾತ್ರವೇ ಕ್ಯಾನ್ಸರ್‌ಕಾರಕವಲ್ಲ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ನೆರವಿನಿಂದ ಸಿಪಿಸಿಆರ್‌ಐ ಸೇರಿದಂತೆ 11 ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳ ಮೂಲಕ ಸಮಗ್ರ ಮತ್ತು ನಿರ್ಣಾಯಕ ವೈಜ್ಞಾನಿಕ ಅಧ್ಯಯನ ಪೂರ್ಣಗೊಳ್ಳುವವರೆಗೂ, ಅಡಿಕೆಯನ್ನು ಗುಂಪು 1 ರ ವರ್ಗೀಕರಣದಿಂದ ಗುಂಪು 2 ಕ್ಕೆ ಮರುವರ್ಗೀಕರಿಸುವಂತೆ WHOಗೆ ಮನವಿ ಸಲ್ಲಿಸುವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.
ಅಡಿಕೆಯನ್ನು ಕ್ಯಾನ್ಸರ್‌ಕಾರಕವೆಂದು ಘೋಷಿಸಲು WHO ಬಳಸಿರುವ ವೈಜ್ಞಾನಿಕ ಆಧಾರ ಮತ್ತು ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೆಂಬ ಆಗ್ರಹವೂ ಸಭೆಯಲ್ಲಿ ಕೇಳಿಬಂತು. ಅಡಿಕೆ ಪುಡಿ, ಪಾನ್ ಮಸಾಲಾ ಮತ್ತು ಇತರ ಮಿಶ್ರಿತ ಉತ್ಪನ್ನಗಳನ್ನು ಕ್ಯಾನ್ಸರ್‌ಕಾರಕವೆಂದು ಗುರುತಿಸಿರುವ WHO, ಅಡಿಕೆಯ ಮಾತ್ರವೇ ಅಥವಾ ಅಡಿಕೆಯನ್ನು ಮಾತ್ರವೇ ವಿಶೇಷ ಸಂಶೋಧನೆ ನಡೆಸಿದೆಯೇ ಎಂಬ ಸಂದೇಹ ನಿವಾರಿಸಬೇಕಿದೆ ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಆಯುರ್ವೇದ ಮತ್ತು ಪಾರಂಪರಿಕ ವೈದ್ಯಕೀಯ ಪದ್ಧತಿಗಳಲ್ಲಿ ಅಡಿಕೆಯನ್ನು ಶತಮಾನಗಳಿಂದ ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತಿದ್ದು, ಈ ಐತಿಹಾಸಿಕ ಹಿನ್ನೆಲೆಯನ್ನೂ ನೀತಿ ನಿರ್ಣಯಗಳಲ್ಲಿ ಪರಿಗಣಿಸಬೇಕು ಎಂದು ಸಭೆ ಅಭಿಪ್ರಾಯಪಟ್ಟಿತು.
ಈ ಸಂದರ್ಭದಲ್ಲಿ ಕ್ಯಾಂಪ್ಕೊ ಸಂಸ್ಥೆ, ರೈತರಿಗೆ ನ್ಯಾಯ ದೊರಕಿಸುವಂತೆ, ಸಾರ್ವಜನಿಕ ಆರೋಗ್ಯದ ಚಿಂತನೆಗಳನ್ನು ಜವಾಬ್ದಾರಿಯಿಂದ ಎದುರಿಸುವ ದೃಷ್ಟಿಯಿಂದ, ನೀತಿ ನಿರೂಪಕಾರರು, ವೈಜ್ಞಾನಿಕ ಸಂಸ್ಥೆಗಳು ಹಾಗೂ ಅಂತರರಾಷ್ಟ್ರೀಯ ಸಂಘಟನೆಗಳೊಂದಿಗೆ ಸಂವಾದದ ಮೂಲಕ ಸಮಸ್ಯೆ ಬಗೆಹರಿಸಲು ಯೋಜನೆ ರೂಪಿಸಲಾಯಿತು. ಮುಂದಿನ ದಿನಗಳಲ್ಲಿ ಅಡಿಕೆ ಹಾನಿಕಾರಕ ಪಟ್ಟಿಯಿಂದ ತೆಗೆಯಲು ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಹಂತ ಹಂತವಾಗಿ ಮುನ್ನಡೆಯುವ ಬಗ್ಗೆಯೂ ಇದೇ ವೇಳೆ ನಿರ್ಧರಿಸಲಾಯಿತು.
ಸಭೆಯಲ್ಲಿ ಸಿಪಿಸಿಆರ್‌ಐ ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್, ವಿಜ್ಞಾನಿ ಡಾ.ರಮೇಶ್, ಟಿಎಸ್ಎಸ್ ಸಂಸ್ಥೆಯ ಡಾ. ಕೇಶವ ಕೋರ್ಸೆ, ರಾಮಯ್ಯ ವಿಶ್ವವಿದ್ಯಾಲಯದ ಡಾ. ರಾಜಾ ಹಾಗೂ ಡಾ. ಕದಂಬಿ, ಮ್ಯಾಮ್ಕೋಸ್ ಎಂಡಿ ಶ್ರೀಕಾಂತ್, ಕ್ಯಾಂಪ್ಕೊ ನಿರ್ದೇಶಕ ವಿಶ್ವನಾಥ ಇ. ಹೆಗಡೆ ಅವರು ಆನ್‌ಲೈನ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸತ್ಯನಾರಾಯಣ , ಕೃಷಿ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ಭಟ್ ವರ್ಮುಡಿ, ಅಗ್ರಿಲೀಫ್ ಸಂಸ್ಥೆಯ ಅವಿನಾಶ್ ರಾವ್, ಎಆರ್‌ಡಿಎಫ್ ಕಾರ್ಯನಿರ್ವಹಣಾಧಿಕಾರಿ ಡಾ.ಕೇಶವ ಭಟ್, ದಂತ ವೈದ್ಯ ಡಾ.ಪ್ರಕಾಶ್, ವಿವೇಕಾನಂದ ಆಯುರ್ವೇದ ಸಂಸ್ಥೆಯ ಡಾ.ಗುರುರಾಜ್, ಕ್ಯಾಂಪ್ಕೋ ನಿರ್ದೇಶಕ ಮುರಳಿಕೃಷ್ಣ ಚಳ್ಳಂಗಾರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.



