Monday, September 15, 2025

ಆಸ್ಪತ್ರೆ ಆವರಣದಲ್ಲಿಯೇ ಗರ್ಭಿಣಿಗೆ ಹೆರಿಗೆ: ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತ

ದಿಗಂತ ವರದಿ ವಿಜಯಪುರ:

ನಗರದ ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯತೆಯಿಂದ ಆಸ್ಪತ್ರೆ ಆವರಣದಲ್ಲಿಯೇ ಗರ್ಭಿಣಿಗೆ ಹೆರಿಗೆ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಕಾವೇರಿ ಎಂಬ ತುಂಬು ಗರ್ಭಿಣಿಯನ್ನು ಆಂಬ್ಯುಲೆನ್ಸ ನಲ್ಲಿ ಜಿಲ್ಲಾಸ್ಪತ್ರೆ ಆವರಣಕ್ಕೆ ತರಲಾಗಿದ್ದು, ಈ ವೇಳೆ ಗರ್ಭಿಣಿ ಅರ್ಧ ಗಂಟೆ ತೀವ್ರನೋವಿನಿಂದ ಬಳಲಿದ್ದರೂ, ಆಸ್ಪತ್ರೆ ಸಿಬ್ಬಂದಿಗಳು ತುರ್ತಾಗಿ ಸ್ಟ್ರೆಚರ್‌ನಲ್ಲಿ ತೆಗೆದಕೊಂಡು ಹೋಗಿ, ಹೆರಿಗೆ ವ್ಯವಸ್ಥೆ ಮಾಡುವಲ್ಲಿ ವಿಳಂಬ ಮಾಡಿದ್ದಾರೆ.

ಆಗ ಸ್ಥಳದಲ್ಲಿದ್ದ ಮಹಿಳೆಯರು ಆಸ್ಪತ್ರೆಯ ಬಾಗಿಲು ಪಕ್ಕದಲ್ಲಿಯೇ ಗರ್ಭಿಣಿಯನ್ನು ಸೀರೆಯಿಂದ ಮರೆ ಮಾಡಿ, ಹೆರಿಗೆ ಮಾಡಿಸಿದ್ದು, ತಾಯಿ, ಮಗು ಆರೋಗ್ಯವಾಗಿದೆ.

ಇನ್ನು ಇಲ್ಲಿನ ಜಿಲ್ಲಾಸ್ಪತ್ರೆ ಈ ಭಾಗದಲ್ಲಿ ಹೆಸರಾಗಿದ್ದು, ವೈದ್ಯರು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಹೊಂದಿದೆ. ಇಂತಹ ಆಸ್ಪತ್ರೆ ಬಾಗಿಲಿಗೆ ತುಂಬು ಗರ್ಭಿಣಿಯನ್ನು ಕರೆತಂದರೂ ತುರ್ತಾಗಿ ಸ್ಪಂಧಿಸಿ, ಹೆರಿಗೆ ಮಾಡಿಸದ ಆಸ್ಪತ್ರೆ ಸಿಬ್ಬಂದಿಗಳು ನಿರ್ಲಕ್ಷ್ಯ ಮಾಡಿರುವುದು ಖಂಡನೀಯ. ಹೆರಿಗೆ ವೇಳೆ ಏನಾದರೂ ಹೆಚ್ಚು, ಕಮ್ಮಿ ಆಗಿದ್ದರೆ ಯಾರು ಜವಾಬ್ದಾರಿ ? ಎಂದು ಸ್ಥಳದಲ್ಲಿದ್ದ ಜನರು, ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಗರ್ಭಿಣಿಯನ್ನು ಬಸವನಬಾಗೇವಾಡಿಯಿಂದ ಕರೆತರುವಾಗ ತಡವಾಗಿರಬಹುದು. ಅಲ್ಲಿನವರು ಬೇಗ ಕಳಿಸಿದ್ದರೆ ಇಂತಹ ಸಂದರ್ಭ ಬರುತ್ತಿರಲಿಲ್ಲ. ಕೆಲವೊಮ್ಮೆ ಈ ರೀತಿ ಆಗುತ್ತದೆ. ಸದ್ಯ ತಾಯಿ, ಮಗು ಆರೋಗ್ಯವಾಗಿದ್ದು, ಯಾವುದೇ ರೀತಿ ಆತಂಕ ಪಡುವ ಅಗತ್ಯತೆಯಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ