ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ಪತಿಯೇ ತನ್ನ ಪತ್ನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಹತ್ಯೆಯಾದ ಮಹಿಳೆಯನ್ನು ನೇತ್ರಾ (32) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ನವೀನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಐದು ತಿಂಗಳ ಹಿಂದಷ್ಟೇ ಈ ಇವರಿಬ್ಬರ ಮದುವೆಯಾಗಿತ್ತು. ಆದರೆ ವಿವಾಹ ಜೀವನ ಆರಂಭವಾದ ಕೆಲವೇ ತಿಂಗಳಲ್ಲಿ ಪರಸ್ಪರ ಅಸಮಾಧಾನ ಮತ್ತು ಜಗಳಗಳಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಪತಿ-ಪತ್ನಿಯ ನಡುವೆ ವಾಗ್ವಾದ ನಡೆದಿದ್ದ ಕಾರಣ ನೇತ್ರಾ ತವರು ಮನೆ ಸೇರಿದ್ದಳು. ನವೀನ್, ನೇತ್ರಾವತಿಯ ಕುಟುಂಬದ ಹಿರಿಯರು ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಗಂಡ ನವೀನ್ನಿಂದ ಸಂಪೂರ್ಣ ದೂರವಾಗುವ ಯೋಚನೆ ಮಾಡಿದ್ದ ನೇತ್ರಾವತಿ ವಿಚ್ಛೇದನ ನೀಡಲು ಸಿದ್ದತೆ ನಡೆಸಿದ್ದಳು. ಇದೇ ವಿಷಯಕ್ಕೆ ಕೋಪಗೊಂಡ ಪತಿ ನವೀನ್ ತನ್ನ ಹೆಂಡತಿಯ ತವರು ಮನೆಗೆ ತೆರಳಿ ಚಾಕುವಿನಿಂದ ಇರಿದಿದ್ದಾನೆ ಎಂದು ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ನೇತ್ರಾಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಈ ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿದ ಆಲ್ದೂರು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

